ನವದೆಹಲಿ/ ಚೆನ್ನೈ: ಭಾರತೀಯ ಕರಾವಳಿ ಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಅವರು ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ ಪಡೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಚೆನ್ನೈಗೆ ಬಂದಿದ್ದರು. ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತದೇಹವನ್ನು ನವದೆಹಲಿಗೆ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಕೇಶ್ ಪಾಲ್ ಅವರು ಕರಾವಳಿ ಪಡೆಯ 25ನೇ ಮಹಾನಿರ್ದೇಶಕರಾಗಿ ಕಳೆದ ವರ್ಷ ಜುಲೈ 19ರಂದು ಅಧಿಕಾರ ವಹಿಸಿಕೊಂಡಿದ್ದರು. 34 ವರ್ಷಗಳ ವೃತ್ತಿಜೀವನದಲ್ಲಿ ಅವರು ನೌಕಾಪಡೆ ಮತ್ತು ಕರಾವಳಿ ಪಡೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ.