ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಸ್ಟಿನ್ ಬೀಬರ್ ಪಾರ್ಶ್ವವಾಯುವನ್ನು ಭಾರತಕ್ಕೆ ಹೋಲಿಸಿದ ಕಾಮಿಡಿಯನ್ ಮುನಾವರ್

ಅಕ್ಷರ ಗಾತ್ರ

ಬೆಂಗಳೂರು: ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಅವರಿಗೆ ರಾಮ್‌ಸೆ ಹಂಟ್ ಸಿಂಡ್ರೋಮ್‌ನಿಂದ ಮುಖದ ಬಲಭಾಗಕ್ಕೆ ಪಾರ್ಶ್ವವಾಯು ಕಾಣಿಸಿಕೊಂಡಿದೆ.ಸ್ವತಃ ಜಸ್ಟಿನ್ ಬೀಬರ್ ಅವರೇ ಈ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದು, ಸದ್ಯ ಸಂಗೀತ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ಈ ಸುದ್ದಿ ಜಗತ್ತಿನಾದ್ಯಂತ ಬೀಬರ್ ಅಭಿಮಾನಿಗಳಿಗೆ ಹಾಗೂ ಸಂಗೀತ ಪ್ರಿಯರಿಗೆ ಬರಸಿಡಿಲಿನಂತೆ ಎರಗಿದೆ. ನಿನ್ನೆಯಿಂದ ಅವರ ಆರೋಗ್ಯ ಸುಧಾರಣೆಗೆ ಅನೇಕರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಇನ್ನು ಕಾಮಿಡಿಯನ್ ಮುನಾವರ್ ಫಾರೂಕಿ ಅವರು ಜಸ್ಟಿನ್ ಬೀಬರ್ ಅವರ ಪಾರ್ಶ್ವವಾಯುವಿಗೆ ಭಾರತವನ್ನು ಹೋಲಿಕೆ ಮಾಡಿ ಕುಹಕವಾಡಿದ್ದಾರೆ. ಡಿಯರ್ ಜಸ್ಟಿನ್ ಬೀಬರ್ ಅವರೇ ನಿಮ್ಮ ಸಮಸ್ಯೆಯನ್ನು ನಾನು ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬಲ್ಲೇ. ಇಲ್ಲಿಯೂ ಕೂಡ ಭಾರತದ ಬಲಭಾಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಬಲಪಂಥೀಯ ಕೇಂದ್ರ ಸರ್ಕಾರದ ಬಗ್ಗೆ ಕುಹಕವಾಡಿದ್ದಾರೆ.

ಆದರೆ, ಒಬ್ಬರ ಆರೋಗ್ಯ ಸಮಸ್ಯೆಯನ್ನು ಕೆಟ್ಟ ಕಾಮಿಡಿಗೆ ಬಳಸಿಕೊಂಡು ಕುಹಕವಾಡುವುದು ಸರಿಯಲ್ಲ ಎಂದು ಅನೇಕರು ಮುನಾವರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ಹಿಂದೆಯೂ ಕೂಡ ಅವರು ಗೋದ್ರಾ ಹತ್ಯಾಕಾಂಡ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಟ್ವೀಟ್‌ಗಳನ್ನು ಮಾಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಬೀಬರ್ ಹಂಚಿಕೊಂಡ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ 4.50 ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಬೀಬರ್ ಬೇಗ ಹುಶಾರಾಗಿ ಬಾ ಎಂದು ಪ್ರಾರ್ಥಿಸಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 24 ಕೋಟಿ ಜನ ಅನುಯಾಯಿಗಳಿದ್ದಾರೆ.

ಬೀಬರ್ ಮುಖದ ಪಾರ್ಶ್ವವಾಯುವಿಗೆ ತುತ್ತಾಗಿರುವುದರಿಂದ ಅವರ ಮುಖದ ಬಲಭಾಗದ ಚಲನವಲನಗಳು ನಡೆಯುತ್ತಿಲ್ಲ. ಕಣ್ಣು ಮಿಟುಕಿಸುತ್ತಿಲ್ಲ, ಬಲ ನಾಸಿಕ ಹೊರಳುತ್ತಿಲ್ಲ. ಇದರಿಂದ ಜಸ್ಟಿನ್ ಬೀಬರ್ ಅಭಿಮಾನಿಗಳು ತೀವ್ರ ಶಾಕ್‌ಗೆ ಒಳಗಾಗಿದ್ದಾರೆ.

ಮುಂಬರುವ ವಾರಗಳಲ್ಲಿ ಟೊರಂಟೊ, ವಾಷಿಂಗ್ಟನ್ ಹಾಗೂ ನ್ಯೂಯಾರ್ಕ್‌ನಲ್ಲಿ ಅವರ ಸಂಗೀತ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಸದ್ಯ ಅವು ಮುಂದಕ್ಕೆ ಹೋದಂತಾಗಿವೆ. ‘ನಾನು ಖಂಡಿತವಾಗಿ ಇದರಿಂದ ಗುಣಮುಖನಾಗಿ ಹೊರ ಬರಲಿದ್ದೇನೆ. ಆದರೆ, ಯಾವಾಗ ಎಂಬುದು ಗೊತ್ತಿಲ್ಲ’ ಎಂದು ಬೀಬರ್ ಹೇಳಿದ್ದಾರೆ.

ರಾಮ್‌ಸೆ ಹಂಟ್ ಸಿಂಡ್ರೋಮ್‌ ತಗುಲಿದ ವ್ಯಕ್ತಿಯ ಮುಖದ ಒಂದು ಭಾಗ ಹಾಗೂ ಆ ಭಾಗದ ಕಿವಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಮುಖದ ಪಾರ್ಶ್ವವಾಯು ಸಂಭವಿಸುತ್ತದೆ. ಈ ರೋಗ ಬಹುಪಾಲು ಪ್ರಕರಣಗಳಲ್ಲಿ ಗುಣಪಡಿಸಬಹುದಾಗಿದೆ. ಆದರೆ ಕೆಲ ವಿರಳ ಪ್ರಕರಣಗಳಲ್ಲಿ ವ್ಯಕ್ತಿ ಸಾಯುವವರೆಗೂ ಶಾಶ್ವತವಾಗಿ ಉಳಿದುಬಿಡಬಹುದು.

ಸಾಮಾನ್ಯವಾಗಿ ಈ ರೋಗ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಜಸ್ಟಿನ್ ಬಿಬಿರ್‌ಗೆ ಕಂಡು ಬಂದಿರುವ ಮುಖದ ಪಾರ್ಶ್ವವಾಯುವನ್ನು ಬೇಗನೇ ಗುಣಪಡಿಸಬಹುದಾಗಿದೆ ಎಂದು ಕೆಲ ವೈದ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT