ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್‌ನಲ್ಲಿ ₹83,700 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಗರೆದಿದೆ.
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಮೋದಿ ನೀಡಿದ್ದ ಭರವಸೆಗಳನ್ನು ನೆನಪಿಸಿದ್ದು, ಜಾರ್ಖಂಡ್‌ಗೆ ತಾರತಮ್ಯ ಎಸಗಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ದೂರಿದ್ದಾರೆ.
ರಾಜ್ಯಕ್ಕೆ ನೀಡಬೇಕಿರುವ ₹1.36 ಲಕ್ಷ ಕೋಟಿಯನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಲ್ಲಿದ್ದಲು ರಾಯಧನ, ಕೇಂದ್ರದ ವಿವಿಧ ಯೋಜನೆಗಳಡಿ ಕೇಂದ್ರ ಸರ್ಕಾರವು ಜಾರ್ಖಂಡ್‌ಗೆ ಇನ್ನೂ ಲಕ್ಷಾಂತರ ಕೋಟಿ ರೂಪಾಯಿ ನೀಡಬೇಕಿದೆ ಎಂದಿದ್ದಾರೆ.
ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ಗಣಿಗಳನ್ನು ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆಗಳು ನಿರ್ವಹಿಸುತ್ತಿದ್ದು, ಇವು ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತವನ್ನು ನೀಡಬೇಕಿದೆ ಎಂದು ಜೈರಾಮ್ ಹೇಳಿದ್ದಾರೆ.
ವಸತಿ ಯೋಜನೆಗಳಡಿ ರಾಜ್ಯದ ಎಂಟು ಲಕ್ಷ ಫಲಾನುಭವಿಗಳಿಗೆ ಇನ್ನೂ ಪ್ರಯೋಜನ ಒದಗಿಸಿಲ್ಲ. ನೀಡಿದ್ದ ಭರವಸೆಯಂತೆ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿಲ್ಲ ಎಂದು ದೂರಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ, ಮನಮೋಹನ್‌ಸಿಂಗ್ ಸರ್ಕಾರದ ಆಡಳಿತದಲ್ಲಿ ಜಾರ್ಖಂಡ್‌ಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಹೇಳಿದ್ದಾರೆ.