ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಚಿಂತನೆಗಳು ಅಪ್ರಸ್ತುತವಾಗಿವೆ: ಪ್ರಧಾನಿ ಮೋದಿ

Published 7 ಫೆಬ್ರುವರಿ 2024, 11:55 IST
Last Updated 7 ಫೆಬ್ರುವರಿ 2024, 11:55 IST
ಅಕ್ಷರ ಗಾತ್ರ

ನವದೆಹಲಿ: ಬುಧವಾರ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷದ ಚಿಂತನೆಗಳು ಅಪ್ರಸ್ತುತವಾಗಿದ್ದು, ಅದು ಸದಾ ಮೀಸಲಾತಿ ವಿರೋಧಿಯಾಗಿದೆ ಎಂದು ಟೀಕಿಸಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭ ಮಾತನಾಡಿದ ಮೋದಿ, ಕಾಂಗ್ರೆಸ್ ಪತನದ ಬಗ್ಗೆ ಸಹಾನುಭೂತಿ ಇದೆ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷದ ಚಿಂತನೆಗಳು ಅಪ್ರಸ್ತುತವಾಗಿವೆ ಮತ್ತು ಅದು ಅದರ ಕೆಲಸಗಳನ್ನು ಹೊರಗುತ್ತಿಗೆ ನೀಡಿದೆ. ಆ ಪಕ್ಷವು ಈ ಮಟ್ಟಿಗೆ ಕುಸಿದ ಬಗ್ಗೆ ನಮಗೆ ದುಃಖವಿದೆ. ಹಾಗಾಗಿ, ನಾವು ನಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿದ್ದೇವೆ’ ಎಂದು ವ್ಯಂಗ್ಯ ಮಾಡಿದ್ದಾರೆ.

ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರೂ ಅವರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಉಲ್ಲೇಖಿಸಿದ ಮೋದಿ, ದೇಶದ ಮೊದಲ ಪ್ರಧಾನ ಮಂತ್ರಿ ಯಾವುದೇ ರೀತಿಯ ಮೀಸಲಾತಿಗೆ ವಿರೋಧಿಯಾಗಿದ್ದರು ಎಂಬುದನ್ನು ಇದು ಹೇಳುತ್ತದೆ. ವಿಶೇಷವಾಗಿ ಉದ್ಯೋಗದಲ್ಲಿ ಇದು ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದರು ಎಂಬುದಾಗಿ ಮೋದಿ ತಿಳಿಸಿದ್ದಾರೆ.

‘ಕಾಂಗ್ರೆಸ್ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾಯಿತವಾದ ಸರ್ಕಾರಗಳನ್ನು ವಜಾಗೊಳಿಸಿದೆ. ಕಾಂಗ್ರೆಸ್ ಯಾವಾಗಲೂ ದಲಿತರು, ಹಿಂದುಳಿದ ವರ್ಗಗಳು, ಆದಿವಾಸಿಗಳ ವಿರೋಧಿಯಾಗಿದೆ’ ಎಂದು ಟೀಕಿಸಿದ್ದಾರೆ.

ಇದೀಗ, ಉತ್ತರ–ದಕ್ಷಿಣವಾಗಿ ದೇಶವನ್ನು ಇಬ್ಭಾಗಿಸುವ ಹೇಳಿಕೆಗಳನ್ನು ಕಾಂಗ್ರೆಸ್ ನೀಡುತ್ತಿದೆ. ದೊಡ್ಡ ಪ್ರಮಾಣದ ಭೂಮಿಯನ್ನು ಶತ್ರು ದೇಶಕ್ಕೆ ಬಿಟ್ಟುಕೊಟ್ಟ ಕಾಂಗ್ರೆಸ್, ಆಂತರಿಕ ಭದ್ರತೆ ಕುರಿತಂತೆ ಈಗ ನಮಗೆ ಉಪದೇಶ ಮಾಡುತ್ತಿದೆ ಎಂದೂ ಮೋದಿ ಕಿಡಿಕಾರಿದ್ದಾರೆ.

‘ತನ್ನ ನೀತಿಗಳು ಮತ್ತು ನಾಯಕರ ಬಗ್ಗೆ ಗ್ಯಾರಂಟಿ ಇಲ್ಲದ ಕಾಂಗ್ರೆಸ್, ಮೋದಿ ಗ್ಯಾರಂಟಿಯನ್ನು ಪ್ರಶ್ನಿಸುತ್ತಿದೆ’ ಎಂದು ಕುಟುಕಿದ್ದಾರೆ.

ದೇಶವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದದ್ದು ಕಾಂಗ್ರೆಸ್‌ಗೆ ತಿಳಿದಿದ್ದರೂ ಅವುಗಳನ್ನು ಪರಿಹರಿಸಲು ಯಾವುದೇ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಷ್ಟದ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದು, ಈಗ ದೇಶವನ್ನು ಸಮಸ್ಯೆಗಳಿಂದ ಹೊರತಂದಿದ್ದೇವೆ’ಎಂದು ಮೋದಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಬ್ರಿಟಿಷರಿಂದ ಪ್ರೇರಣೆ ಪಡೆದಿದೆ. ಅದಕ್ಕಾಗಿಯೇ, ಗುಲಾಮಗಿರಿಯ ಚಿಹ್ನೆಗಳನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿತ್ತು ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT