ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಖರ್ಗೆಗೆ ಪಂಜಾಬ್ ನ್ಯಾಯಾಲಯದಿಂದ ಸಮನ್ಸ್

Published 15 ಮೇ 2023, 8:13 IST
Last Updated 15 ಮೇ 2023, 8:13 IST
ಅಕ್ಷರ ಗಾತ್ರ

ದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಬಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂ ಆರೋಪದ ಮೇಲೆ ಹಿಂದೂ ಸುರಕ್ಷಾ ಪರಿಷತ್‌ ಎಂಬ ಸಂಘಟನೆಯ ಸಂಸ್ಥಾಪಕ ಹಿತೇಶ್ ಭಾರದ್ವಾಜ್ ಎಂಬುವವರು ಸಲ್ಲಿಸಿರುವ ₹100 ಕೋಟಿ ಮಾನನಷ್ಟ ಮೊಕದ್ದಮೆಯಲ್ಲಿ ಪಂಜಾಬ್ ನ್ಯಾಯಾಲಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಬಜರಂಗದಳವನ್ನು ದೇಶವಿರೋಧಿ ಸಂಘಟನೆಗಳೊಂದಿಗೆ ಕಾಂಗ್ರೆಸ್‌ ಹೋಲಿಕೆ ಮಾಡಿದೆ ಎಂದು ಭಾರದ್ವಾಜ್ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗದಳದ ಮೇಲೆ ನಿಷೇಧ ಹೇರುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

‘ಬಜರಂಗದಳವನ್ನು ಕಾಂಗ್ರೆಸ್ ದೇಶವಿರೋಧಿ ಸಂಘಟನೆಗಳೊಂದಿಗೆ ಹೋಲಿಸಿದೆ ಮತ್ತು ಚುನಾವಣೆಯಲ್ಲಿ ಗೆದ್ದರೆ ಅದನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ. ಇದನ್ನು ಗಮನಿಸಿ ನಾನು ಗುರುವಾರ ನ್ಯಾಯಾಲಯದ ಮೊರೆ ಹೋಗಿದ್ದೇನೆ’ ಎಂದು ಭಾರದ್ವಾಜ್‌ ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಜುಲೈ 10 ರಂದು ಸಂಗ್ರೂರ್ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರಮಣದೀಪ್ ಕೌರ್ ಅವರು ಖರ್ಗೆ ಅವರಿಗೆ ಸೂಚಿಸಿದ್ದಾರೆ.

ಕಾಂಗ್ರೆಸ್‌, ಚುನಾವಣಾ ಪ್ರಣಾಳಿಕೆಯನ್ನು ಮೇ 2ರಂದು ಬಿಡುಗಡೆ ಮಾಡಿತ್ತು. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ದ್ವೇಷ ಹರಡುವಂತಹ ವ್ಯಕ್ತಿಗಳು ಮತ್ತು ಪಿಎಫ್‌ಐ, ಬಜರಂಗದಳದಂತಹ ಸಂಘಟನೆಗಳ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲು ಪಕ್ಷವು ಬದ್ಧವಾಗಿದೆ ಎಂದೂ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

ಅರ್ಜಿಯಲ್ಲಿ ಏನಿದೆ?

ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯದ ಜನರ ಮುಂದಿಟ್ಟ ಪ್ರಣಾಳಿಕೆಯಲ್ಲಿ ಪ್ರತಿವಾದಿಯು, ಹಿಂದೂ ಸುರಕ್ಷಾ ಪರಿಷತ್‌ನ ಘಟಕ ಬಜರಂಗದಳ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಪಿಎಎಫ್‌ಐನಂತಹ ನಿಷೇಧಿತ ಸಂಘಟನೆಗೆ ಹೋಲಿಸಿದ್ದಾರೆ. ಬಜರಂಗ ದಳವು ಒಂದು ಸಾಮಾಜಿಕ ಸಂಘಟನೆ. ಸಾಕಷ್ಟು ಮಾನವೀಯ ಕೆಲಸಗಳನ್ನು ಮಾಡಿದೆ. ಆದರೆ, ಇಂತಹ ಸಂಘಟನೆಯ ಗೌರವ ಮತ್ತು ಘನತೆಗೆ ಚ್ಯುತಿ ಉಂಟು ಮಾಡುವಂತಹ ಹೇಳಿಕೆ ನೀಡಿದ್ದಾರೆ. ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಹನುಮಾನ್‌ ದೇವರ ಭಕ್ತರ ಮನಸಿಗೆ ಘಾಸಿಯಾಗಿದೆ. ಪ್ರತಿವಾದಿಯು ₹ 100 ಕೋಟಿ ಪರಿಹಾರ ನೀಡಬೇಕು ಎಂದು ಅರ್ಜಿದಾರರು ಮೊಕದ್ದಮೆ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT