ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.38 ಲಕ್ಷ ನೀಡಿ ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಖರ್ಗೆ ಚಾಲನೆ

Published 18 ಡಿಸೆಂಬರ್ 2023, 6:37 IST
Last Updated 18 ಡಿಸೆಂಬರ್ 2023, 6:37 IST
ಅಕ್ಷರ ಗಾತ್ರ

ನವದೆಹಲಿ: ಖುದ್ದು ₹1.38 ಲಕ್ಷ ದೇಣಿಗೆ ನೀಡುವ ಮೂಲಕ ಕಾಂಗ್ರೆಸ್‌ನ ‘ಡೊನೇಟ್‌ ಫಾರ್ ದೇಶ್‌’ (ದೇಶಕ್ಕಾಗಿ ದೇಣಿಗೆ) ಕಾರ್ಯಕ್ರಮಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಇಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ನೀವು ಶ್ರೀಮಂತರಿಂದ ಮಾತ್ರ ದೇಣಿಗೆ ಸಂಗ್ರಹಿಸಿದರೆ, ಅವರ ಪರವಾಗಿ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ನಮ್ಮ ಪಕ್ಷ ಯಾವತ್ತೂ ಶೋಷಿತರ, ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಪರ ಹಾಗೂ ಮೇಲ್ವರ್ಗದವರ ಪರವಾಗಿ ಇದೆ. ಅವರಿಗೂ ಕೂಡ ನಾವು ಸಹಾಯ ಮಾಡಬೇಕಿದೆ’ ಎಂದು ಅವರು ಹೇಳಿದರು.

ಜನ ಸಾಮಾನ್ಯರ ಸಹಾಯದಿಂದ ದೇಶವನ್ನು ಕಟ್ಟಲು ಈ ಅಭಿಯಾನದಿಂದ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

‘ಇದು ಅಭಿಯಾನಕ್ಕಿಂತ ಹೆಚ್ಚಿನದು. ಇದು ಶೋಷಿತ ಸಮುದಾಯಗಳ ಹಕ್ಕುಗಳನ್ನು ಎತ್ತಿಹಿಡಿಯುವ ಬದ್ಧತೆಯಾಗಿದೆ, ಅಸಮಾನತೆಗಳನ್ನು ನಿವಾರಿಸಲು ಮತ್ತು ಶ್ರೀಮಂತರಿಗೆ ಒಲವು ತೋರುವ ಸರ್ಕಾರದ ವಿರುದ್ಧ ತೋರುವ ವಿರೋಧವಾಗಿದೆ ಇದು. ನಾವು ನಿರುದ್ಯೋಗ ಹಾಗೂ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ’ ಎಂದು ಕಾಂಗ್ರೆಸ್‌ ಕೋಶಾಧಿಕಾರಿ ಅಜಯ್ ಮಾಕೇನ್‌ ಹೇಳಿದರು.

ಡಿ.28ಕ್ಕೆ ಕಾಂಗ್ರೆಸ್ ಪಕ್ಷಕ್ಕೆ 138 ವರ್ಷ ತುಂಬಲಿದ್ದು, ಹೀಗಾಗಿ ₹138, ₹1,380, ₹13,800 ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡಿ ಎಂದು ಕಾಂಗ್ರೆಸ್ ಜನರಲ್ಲಿ ವಿನಂತಿಸಿಕೊಂಡಿದೆ.

ರಾಜ್ಯಮಟ್ಟದ ನಾಯಕರು, ಚುನಾಯಿತ ಪ್ರತಿನಿಧಿಗಳು, ಪಿಸಿಸಿ ಅಧ್ಯಕ್ಷರು ಹಾಗೂ ಎಐಸಿಸಿ ಪದಾಧಿಕಾರಿಗಳು ಕನಿಷ್ಠ ₹1,380 ದೇಣಿಗೆ ನೀಡಬೇಕು ಎಂದು ಕಾಂಗ್ರೆಸ್‌ ಸೂಚಿಸಿದೆ.

ಡಿ.28ರವರೆಗೆ ಈ ಅಭಿಯಾನ ಆನ್‌ಲೈನ್‌ ಮೂಲಕ ಇರಲಿದ್ದು, ಬಳಿಕ ಪಕ್ಷದ ಸದಸ್ಯರು ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಲಿದ್ದಾರೆ.

ದೇಣಿಗೆ www.donateinc.in ಹಾಗೂ www.inc.in ಆನ್‌ಲೈನ್‌ ಚಾನಲ್‌ ಕಾಂಗ್ರೆಸ್ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT