ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‍ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

Published 18 ಮಾರ್ಚ್ 2024, 23:17 IST
Last Updated 18 ಮಾರ್ಚ್ 2024, 23:17 IST
ಅಕ್ಷರ ಗಾತ್ರ

ನವದೆಹಲಿ: ಶಕ್ತಿ’ಯನ್ನು ಕೊನೆಗೊಳಿಸುವ ಮಾತುಗಳು ‘ಇಂಡಿಯಾ’ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ದೇಶವನ್ನು ಅಸುರ ಶಕ್ತಿಯು ಮುನ್ನಡೆಸುವುದೋ ಅಥವಾ ದೈವಿಕ ಶಕ್ತಿಯು ಮುನ್ನಡೆಸುವುದೋ ಎಂಬುದು ಚುನಾವಣೆಯಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿದೆ.

ಮುಂಬೈನಲ್ಲಿ ನಡೆದ ರ್‍ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಮೋದಿ ಅವರ ವಿರುದ್ಧದ ಹೋರಾಟವು ವೈಯಕ್ತಿಕ ಮಟ್ಟದಲ್ಲಿ ಆಗುತ್ತಿಲ್ಲ. ಏಕೆಂದರೆ ಮೋದಿ ಅವರು ಮುಖವಾಡ ಮಾತ್ರ, ಅವರು ಒಂದು ಶಕ್ತಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ, ‘ಶಕ್ತಿ’ಯನ್ನು ಆರಾಧಿಸುವವರು ಹಾಗೂ ಶಕ್ತಿಯನ್ನು ನಾಶಪಡಿಸಲು ಬಯಸುವವರ ನಡುವಿನ ಹೋರಾಟ ಇದು ಎಂದು ಹೇಳಿದ್ದರು.

‘ಅವರು ತಮ್ಮ ಪ್ರಣಾಳಿಕೆಯನ್ನು ಘೋಷಿಸಿದ್ದಾರೆ... ಶಕ್ತಿಯ ವಿರುದ್ಧ ತಮ್ಮ ಹೋರಾಟ ಎಂದಿದ್ದಾರೆ. ನನ್ನ ಪಾಲಿಗೆ ಪ್ರತಿ ತಾಯಿ, ಪ್ರತಿ ಮಗಳು ಒಂದು ಶಕ್ತಿ ಇದ್ದಂತೆ. ತಾಯಂದಿರೇ, ಸಹೋದರಿಯರೇ, ನಾನು ನಿಮ್ಮನ್ನು ಶಕ್ತಿ ರೂಪದಲ್ಲಿ ಪೂಜಿಸುತ್ತೇನೆ. ನಾನು ಭಾರತ ಮಾತೆಯ ಪೂಜಾರಿ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದಕ್ಕೆ ತಿರುಗೇಟು ಎಂಬಂತೆ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಅಸುರ ಶಕ್ತಿಗೆ ಹೋಲಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯಗಳನ್ನು ದೇಶವು ಕಂಡಿದೆ ಎಂದು ಹೇಳಿದೆ. ‘ಅಸುರ ಶಕ್ತಿಯ ಮೇಲೆ ರಾಹುಲ್ ಅವರು ವಾಗ್ದಾಳಿ ನಡೆಸಿದ ನಂತರದಲ್ಲಿ ಬಿಜೆಪಿಯ ಎಲ್ಲರೂ ಆಧಾರರಹಿತವಾಗಿ ಮಾತನಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.

‘ಮಹಿಳಾ ಕುಸ್ತಿಪಟುಗಳು ದೌರ್ಜನ್ಯಕ್ಕೆ ಗುರಿಯಾಗಿದ್ದಾಗ ಪ್ರಧಾನಿಯವರ ಶಕ್ತಿ ಪೂಜೆ ಎಲ್ಲಿತ್ತು’ ಎಂದು ಖೇರಾ ಪ್ರಶ್ನಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಬಿಜೆಪಿಯು ಕಠುವಾ, ಉನ್ನಾವ್, ಹಾಥರಸ್‌ನಲ್ಲಿ ಅತ್ಯಾಚಾರಿಗಳ ಪರವಾಗಿ ಮೋರ್ಚಾಗಳನ್ನು ಸಂಘಟಿಸುತ್ತಿದ್ದಾಗ ಶಕ್ತಿಯ ಪೂಜೆ ನೆನಪಾಗಲಿಲ್ಲವೇ ಎಂದು ಕೂಡ ಪ್ರಶ್ನಿಸಿದ್ದಾರೆ.

‘ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲಾಗಿ ಓಡುವಂತೆ ಮಾಡಿದಾಗ ಯಾವ ಶಕ್ತಿಯು ನಿಮ್ಮನ್ನು ಮೌನವಾಗಿರುವಂತೆ ಮಾಡಿತು’ ಎಂದು ಖೇರಾ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT