ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಿ ಪಡೆ ಹಿಮ್ಮೆಟ್ಟಿಸುವುದು ಯಾವಾಗ?: ಪಿಎಂ ಮೋದಿಗೆ ಕಾಂಗ್ರೆಸ್‌ ಪ್ರಶ್ನೆ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ
Published : 16 ಆಗಸ್ಟ್ 2023, 13:15 IST
Last Updated : 16 ಆಗಸ್ಟ್ 2023, 13:15 IST
ಫಾಲೋ ಮಾಡಿ
Comments

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತ ಮಾತೆಯ ರಕ್ಷಣೆಗೆ ಸದಾ ಸಿದ್ಧವೆಂದು ಹೇಳುತ್ತದೆ. ಆದರೆ, ರಕ್ಷಣೆಯ ಬಗ್ಗೆ ಕೇವಲ ವಾಕ್ಚಾತುರ್ಯ ಪ್ರದರ್ಶಿಸಿದರೆ ಸಾಲದು. ಭಾರತ–ಚೀನಾ ಗಡಿ ಭಾಗದಲ್ಲಿ ಶಾಂತಿ ಮರುಸ್ಥಾಪಿಸಲು ಯಾವಾಗ ಕ್ರಮಕೈಗೊಳ್ಳುತ್ತೀರಿ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.  

‘ಗಡಿ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಸಂಬಂಧ ಕಳೆದ ಮೂರು ವರ್ಷಗಳಿಂದಲೂ ಚೀನಾ ಜೊತೆಗೆ ಭಾರತವು ಮಾತುಕತೆ ನಡೆಸುತ್ತಿದೆ. ಪ್ರತಿ ಬಾರಿಯೂ ಮಿಲಿಟರಿ ಮಾತುಕತೆ ವಿಫಲವಾಗಿದೆ. ಇತ್ತೀಚೆಗೆ ನಡೆದ 19ನೇ ಸುತ್ತಿನ ಮಾತುಕತೆಯೂ ಫಲಪ್ರದವಾಗಿಲ್ಲ’ ಎಂದು ‘ಎಕ್ಸ್‌’ನಲ್ಲಿ (ಟ್ವಿಟರ್‌) ದೂರಿದ್ದಾರೆ.

ಪಶ್ಚಿಮ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತಲೆದೋರಿರುವ ಗಡಿ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ಸಂಬಂಧ ಇತ್ತೀಚೆಗೆ ನಡೆದ ಭಾರತ ಮತ್ತು ಚೀನಾ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ಗಡಿ ರೇಖೆಯಲ್ಲಿ ಎರಡು ಕಡೆಯಿಂದಲೂ ತ್ವರಿತಗತಿಯಲ್ಲಿ ಶಾಂತಿಯ ವಾತಾವರಣವನ್ನು ಕಾಯ್ದುಕೊಳ್ಳುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಜಂಟಿ ಹೇಳಿಕೆ ನೀಡಿವೆ. 

ಸುದೀರ್ಘ ಚರ್ಚೆಯಲ್ಲಿ ಎರಡೂ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಆದರೆ, ಘರ್ಷಣೆ ಪೀಡಿತ ನೆಲದಲ್ಲಿ ನಿಯೋಜಿಸಿರುವ ರಕ್ಷಣಾ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿರುವ ಸುರ್ಜೇವಾಲಾ, ‘ಮೂರು ವರ್ಷ ಮೂರು ತಿಂಗಳು ಕಳೆದರೂ ಯಥಾಸ್ಥಿತಿ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಲಡಾಕ್‌ನ ಡೆಪ್ಸಾಂಗ್ ಪ್ರದೇಶದಲ್ಲಿನ 65 ಗಸ್ತು ಕೇಂದ್ರಗಳ ಪೈಕಿ 26 ಕೇಂದ್ರಗಳಲ್ಲಿ ಭಾರತೀಯ ಪಡೆಗಳು ಗಸ್ತು ತಿರುಗಲು ಸಾಧ್ಯವಾಗಿಲ್ಲ’ ಎಂದು ಹೇಳಿದ್ದಾರೆ.

ಚೀನಾ ಪಡೆಗಳು ಭಾರತಕ್ಕೆ ಸೇರಿರುವ ‘ವೈ’ ಜಂಕ್ಷನ್‌ ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿವೆ. ಸುಮಾರು ಒಂದು ಸಾವಿರ ಚ.ಕಿ.ಮೀ.ನಷ್ಟು ಪ್ರದೇಶ ಅತಿಕ್ರಮಣವಾಗಿದೆ. ಆದರೂ, ಮೋದಿ ಸರ್ಕಾರ ಯಾವುದೇ ಕ್ರಮವಹಿಸಿಲ್ಲ. ಭಾರತದ ನೆಲೆಯಿಂದ ಚೀನಿ ಸೈನಿಕರನ್ನು ಹಿಮ್ಮೆಟ್ಟಿಸುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ದೇಶದ ಭೂಪ್ರದೇಶ ಪ್ರವೇಶಿಸಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಮೋದಿ ಅವರು ಈ ಹಿಂದೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಹೇಳಿದ್ದರು. ಹಾಗಿದ್ದರೆ ಚೀನಾ ಮಿಲಿಟರಿ ಪಡೆಗಳ ಜೊತೆಗೆ ಮಾತುಕತೆ ನಡೆಸುವ ಔಚಿತ್ಯವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT