ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರು ಪ್ರಧಾನಿ: ಮೋದಿ

Published 27 ಏಪ್ರಿಲ್ 2024, 16:22 IST
Last Updated 27 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ಕೊಲ್ಹಾಪುರ (ಮಹಾರಾಷ್ಟ್ರ): ಕಾಂಗ್ರೆಸ್‌ ನೇತೃತ್ವದ ‘ಇಂಡಿ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರನ್ನು ಪ್ರಧಾನಿ ಹುದ್ದೆಗೇರಿಸುವ ಚಿಂತನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೊಲ್ಹಾಪುರದಲ್ಲಿ ಶನಿವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ವಿರೋಧ ಪಕ್ಷಗಳು ಮೂರಂಕಿಯ ಸ್ಥಾನಗಳನ್ನು ಪಡೆಯುವ ಅಥವಾ ಅಧಿಕಾರದ ಸನಿಹ ತಲುಪುವ ಸಾಧ್ಯತೆಯೇ ಇಲ್ಲ. ಆದರೂ, ಅವಕಾಶ ಲಭಿಸಿದರೆ ಐದು ವರ್ಷಗಳಲ್ಲಿ ಐವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಲು ಯೋಜನೆ ಹಾಕಿಕೊಂಡಿವೆ’ ಎಂದರು.

‘ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು ಮುಖ್ಯಮಂತ್ರಿ ಸ್ಥಾನವನ್ನು ಎರಡೂವರೆ ವರ್ಷಗಳ ಬಳಿಕ ಉಪಮುಖ್ಯಮಂತ್ರಿಗೆ ಹಸ್ತಾಂತರಿಸಲು ಯೋಜನೆ ಹಾಕಿಕೊಂಡಿದೆ. ಅವರು ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಇದೇ ಸೂತ್ರ ಅನುಸರಿಸಿದ್ದರು’ ಎಂದು ತಿಳಿಸಿದರು.

ಮೊದಲ ಎರಡು ಹಂತಗಳ ಮತದಾನದ ಬಳಿಕ ಎನ್‌ಡಿಎ ಒಕ್ಕೂಟ ವಿರೋಧ ಪಕ್ಷಗಳ ವಿರುದ್ಧ 2–0ರಿಂದ ಮುನ್ನಡೆ ಸಾಧಿಸಿದೆ ಎಂದು ಹೇಳಿದರು. 

ಕಾಂಗ್ರೆಸ್‌ ಪಕ್ಷವು ಧರ್ಮ ಆಧಾರಿತ ಮೀಸಲಾತಿ ಜಾರಿಗೊಳಿಸಲಿಕ್ಕಾಗಿ ದಲಿತರು ಮತ್ತು ಒಬಿಸಿಗಳ ಸೌಲಭ್ಯಗಳನ್ನು ಕಸಿದುಕೊಳ್ಳಲು ಬಯಸಿದೆ.
ನರೇಂದ್ರ ಮೋದಿ, ಪ್ರಧಾನಿ

ಕಾಂಗ್ರೆಸ್‌ ಪಕ್ಷವು ರಾಮಮಂದಿರ ನಿರ್ಮಾಣವನ್ನು ವಿರೋಧಿಸಿದ್ದು ಮಾತ್ರವಲ್ಲದೆ, ಮಂದಿರ ಉದ್ಘಾಟನೆಯ ಆಹ್ವಾನವನ್ನೂ ತಿರಸ್ಕರಿಸಿದೆ. ಓಲೈಕೆ ಮತ್ತು ಓಟ್‌ಬ್ಯಾಂಕ್‌ ರಾಜಕಾರಣ ಮಾಡುವ ವಿರೋಧ ಪಕ್ಷಗಳ ಮೈತ್ರಿಕೂಟವು ಸಾಮಾಜಿಕ ನ್ಯಾಯದ ಕೊಲೆಗೆ ಪ್ರತಿಜ್ಞೆ ಮಾಡಿದೆ’ ಎಂದು ಕಿಡಿಕಾರಿದರು.

ಒಲಿಂಪಿಕ್ಸ್‌ ಕನಸು ನನಸಾಗಿಸುವೆವು: ಶನಿವಾರ ರಾತ್ರಿ ವಾಸ್ಕೊದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ‘ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸುವ ನಿಮ್ಮ ಕನಸನ್ನು ಈಡೇರಿಸುವುದಾಗಿ ಗೋವಾದ ಕ್ರೀಡಾ ಪ್ರೇಮಿಗಳಿಗೆ ನಾನು ಭರವಸೆ ನೀಡುತ್ತಿದ್ದೇನೆ’ ಎಂದರು. 

‘ಭಯೋತ್ಪಾದನೆ ನಕ್ಸಲಿಸಂ ನಿರ್ಮೂಲನೆ’

ಪೋರಬಂದರ್‌: ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದರೆ ಭಯೋತ್ಪಾದನೆ ಮತ್ತು ನಕ್ಸಲಿಸಂಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಇಲ್ಲಿ ಹೇಳಿದರು. ಪೋರಬಂದರ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿ ‘ಕಾಶ್ಮೀರದಲ್ಲಿ ಕಳೆದ ಐದು ವರ್ಷಗಳಲ್ಲಿ ಕಲ್ಲು ತೂರಾಟ ನಡೆಸುವ ಧೈರ್ಯವನ್ನು ಯಾರೂ ತೋರಿಲ್ಲ. ಮೋದಿ ಅವರು ಭಯೋತ್ಪಾದನೆಯನ್ನು ತೊಲಗಿಸಲು ಪಣ ತೊಟ್ಟಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT