ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್ ವಿಧಾನಸಭೆಯಲ್ಲಿ ಗದ್ದಲ: ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಉಚ್ಚಾಟನೆ

Published 23 ಆಗಸ್ಟ್ 2024, 10:54 IST
Last Updated 23 ಆಗಸ್ಟ್ 2024, 10:54 IST
ಅಕ್ಷರ ಗಾತ್ರ

ಗಾಂಧಿನಗರ: ಗುಜರಾತ್‌ ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸ್ಪೀಕರ್‌ ಪೀಠದ ಮುಂಭಾಗಕ್ಕೆ ನುಗ್ಗಿ, ಗದ್ದಲ ಸೃಷ್ಟಿಸಿದರೆಂಬ ಕಾರಣ ನೀಡಿ ಸ್ಪೀಕರ್‌ ಆದೇಶಿಸಿದ್ದಕ್ಕೆ ಕಾಂಗ್ರೆಸ್‌ ಶಾಸಕ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿಗ್ನೇಶ್‌ ಮೇವಾನಿ ಅವರನ್ನು ಸದನದಿಂದ ಉಚ್ಚಾಟಿಸಲಾಗಿದೆ.

ಸ್ಪೀಕರ್‌ ಶಂಕರ್‌ ಚೌಧರಿ ಅವರು ಜಿಗ್ನೇಶ್‌ ಅವರನ್ನು ಉಚ್ಚಾಟಿಸಿ ಆದೇಶ ನೀಡಿದ ಬಳಿಕ ಮಾರ್ಷಲ್‌ಗಳು ಅವರನ್ನು ಸದನದಿಂದ ಹೊರಗೆ ಕರೆದೊಯ್ದರು.

ಗುಜರಾತ್ ಪೊಲೀಸರು ಮಾದಕ ವಸ್ತುವನ್ನು ವಶಪಡಿಸಿಕೊಂಡ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಜಿಗ್ನೇಶ್‌ ಅವರು ಮೇಜಿನ ಮೇಲೆ ನಿಂತುಕೊಂಡು ‘ಅತ್ಯಾಚಾರದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ’ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕುತ್ತ ಕೂಗಾಡಿದರು.

ಅಲ್ಲದೇ ಸ್ಪೀಕರ್ ಪೀಠದ ಮುಂಭಾಗಕ್ಕೆ ಧಾವಿಸಿದ ಅವರು, ‘ರಾಜ್‌ಕೋಟ್‌ ಗೇಮ್‌ ಝೋನ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡ, ಮೊರ್ಬಿ ಸೇತುವೆ ದುರಂತ ಮತ್ತು ವಡೋದರಾದಲ್ಲಿ ದೋಣಿ ಮುಳುಗಿದ ಘಟನೆಗಳ ಕುರಿತು ದೂರದರ್ಶನದಲ್ಲಿ ನೇರಪ್ರಸಾರದಲ್ಲಿ ನನ್ನೊಂದಿಗೆ ಚರ್ಚಿಸಿ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹರ್ಷ ಸಂಘವಿ ಅವರಿಗೆ ಸವಾಲು ಹಾಕಿದರು.

ಈ ವೇಳೆ ಸಜ್ಜನಿಕೆ ಕಾಯ್ದುಕೊಳ್ಳುವಂತೆ ಜಿಗ್ನೇಶ್‌ ಅವರಿಗೆ ಸ್ಪೀಕರ್‌ ಚೌಧರಿ ಹಲವು ಬಾರಿ ತಿಳಿಹೇಳಿದರು. ಆದರೂ ಜಿಗ್ನೇಶ್‌ ವಾಗ್ವಾದ ಮುಂದುವರಿಸಿದರು. ಅವರ ವರ್ತನೆಯನ್ನು ಖಂಡಿಸಿದ ಚೌಧರಿ, ‘ಇಂಥ ನಡವಳಿಕೆಗಳಿಂದ ಅವರು ಸಂವಿಧಾನವನ್ನು ಅಗೌರವಿಸಿದ್ದಾರೆ’ ಎಂದರು.

‘ಶಾಸಕ ಜಿಗ್ನೇಶ್‌ ಅವರು ಪ್ರಚಾರ ಪಡೆಯುವಲ್ಲಿ ಮಾತ್ರವೇ ಆಸಕ್ತಿ ಹೊಂದಿದ್ದಾರೆ. ಅವರ ಈ ವರ್ತನೆ ಸ್ವೀಕಾರಾರ್ಹವಲ್ಲ’ ಎಂದು ಬಿಜೆಪಿ ಶಾಸಕರು ಕಿಡಿ ಕಾರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT