ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯ್‌’ ಬಗ್ಗೆ ನಿಲುವೇನು ತಿಳಿಸಿ

ಪ್ರಧಾನಿ ನರೇಂದ್ರ ಮೋದಿಗೆ ಸುರ್ಜೇವಾಲಾ ಸವಾಲು
Last Updated 26 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಐದು ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ ₹ 72,000 ಧನಸಹಾಯ ನೀಡುವ ‘ನ್ಯಾಯ್‌’ ಯೋಜನೆಯ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಕಾಂಗ್ರೆಸ್‌ ಪಕ್ಷ ಸವಾಲು ಹಾಕಿದೆ.

ದೇಶದ ಐದು ಕೋಟಿ ಬಡ ಕುಟುಂಬಗಳಿಗೆ ತಿಂಗಳಿಗೆ ₹ 6,000ದಂತೆ ವಾರ್ಷಿಕ ₹ 72 ಸಾವಿರ ಹಣವನ್ನು ನೀಡುವ ‘ಕನಿಷ್ಠ ಆದಾಯ ಯೋಜನೆ’ಯನ್ನು (ನ್ಯೂನತಮ್‌ ಆಯ್‌ ಯೋಜನಾ– ‘ನ್ಯಾಯ್‌’) ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸೋಮವಾರ ಘೋಷಿಸಿದ್ದರು.

ಮಂಗಳವಾರ ಈ ಬಗ್ಗೆ ಮಾತನಾಡಿದ ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ, ‘ಕಾಂಗ್ರೆಸ್‌ ಘೋಷಿಸಿರುವ ‘ಕನಿಷ್ಠ ಆದಾಯ ಯೋಜನೆ’ಯು ಮಹಿಳಾ ಕೇಂದ್ರಿತ ಯೋಜನೆಯಾಗಿದ್ದು, ಹಣವು ನೇರವಾಗಿ ಕುಟುಂಬದ ಮಹಿಳೆಯ ಬ್ಯಾಂಕ್‌ ಖಾತೆಗೆ ಹೋಗುತ್ತದೆ. ಶ್ರೀಮಂತರ ಪರವಾಗಿರುವ ಪ್ರಧಾನಿ ಮೋದಿ, ಬಡತನ ನಿರ್ಮೂಲನೆಗಾಗಿಜಗತ್ತಿನಲ್ಲೇ ಅತಿ ದೊಡ್ಡದೆನಿಸಿರುವ ಈ ಯೋಜನೆಯನ್ನು ವಿರೋಧಿಸುತ್ತಿರುವುದು ನಾಚಿಕೆಗೇಡು’ ಎಂದರು.

‘ಇದೊಂದು ದುಡುಕಿನ ಯೋಜನೆ’ ಎಂಬ ಕೇಂದ್ರದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಸುರ್ಜೇವಾಲಾ, ‘ಕಳೆದ 70ವರ್ಷಗಳಲ್ಲಿ ಯಾವ ಪಕ್ಷವೂ ಬಡವರ ವಿಶ್ವಾಸಕ್ಕೆ ಈ ಪ್ರಮಾಣದಲ್ಲಿ ಧಕ್ಕೆ ಉಂಟುಮಾಡಿರಲಿಲ್ಲ’ ಎಂದಿದ್ದಾರೆ.

ನೀತಿ ಆಯೋಗದ ಅಧ್ಯಕ್ಷ ರಾಜೀವ್‌ ಕುಮಾರ್‌ ಅವರನ್ನೂ ಟೀಕೆಗೆ ಒಳಪಡಿಸಿದ ಸುರ್ಜೇವಾಲಾ, ‘ನೀತಿ ಆಯೋಗದ ಹೆಸರನ್ನು ‘ರಾಜನೀತಿ ಆಯೋಗ’ ಎಂದು ಬದಲಿಸುವುದು ಅಗತ್ಯ. ರಾಜೀವ್‌ ಅವರು ಬಿಜೆಪಿ ಕಚೇರಿಯಿಂದ ಕೆಲಸ ಮಾಡುವ ಬದಲು ಚುನಾವಣೆಯಲ್ಲಿ ಸ್ಪರ್ಧಿಸುವುದು ಸೂಕ್ತ’ ಎಂದರು. ‘ನ್ಯಾಯ್‌’ ಬಗ್ಗೆ ಮಾಹಿತಿ ನೀಡುತ್ತಾ, ‘ಯೋಜನೆಯಡಿ ಪ್ರತಿ ಬಡ ಕುಟುಂಬವೂ ವಾರ್ಷಿಕ ₹ 72 ಸಾವಿರ ಧನಸಹಾಯ ಪಡೆಯಲು ಅರ್ಹವಾಗಿರುತ್ತದೆ. ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಬಡತನದ ಪ್ರಮಾಣ ಕಡಿಮೆ ಆಗಿದೆ ಎಂಬುದನ್ನು 2016–17ನೇ ಸಾಲಿನಲ್ಲಿ ಮೋದಿ ಸರ್ಕಾರ ನಡೆಸಿದ್ದ ಆರ್ಥಿಕ ಸಮೀಕ್ಷೆಯ ವರದಿ ಸ್ಪಷ್ಟಪಡಿಸಿದೆ. ಸ್ವಾತಂತ್ರ್ಯ ಲಭಿಸಿದಾಗ ಶೇ 70ರಷ್ಟಿದ್ದ ಬಡತನವು 2011–12ರ ವೇಳೆಗೆ ಶೇ 22ಕ್ಕೆ ಇಳಿದಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ‘ನ್ಯಾಯ್‌’ ಯೋಜನೆಯನ್ನು ಜಾರಿ ಮಾಡುವ ಮೂಲಕ ದೇಶದಲ್ಲಿ ಉಳಿದಿರುವ ಶೇ 20ರಷ್ಟು ಬಡತನವನ್ನೂ ನಿರ್ಮೂಲನೆ ಮಾಡಲಿದೆ’ ಎಂದರು.

‘ನ್ಯಾಯ್‌’ಗೆ ಲೋಗೊ ರಚಿಸಿ

ರಾಹುಲ್ ಗಾಂಧಿ ಅವರ ಕನಿಷ್ಠ ಆದಾಯ ಖಾತರಿ ಘೋಷಣೆ ‘ನ್ಯಾಯ್‌’ಗೆ ಲೋಗೊ ರಚಿಸುವ ಸ್ಪರ್ಧೆಯನ್ನು ಕಾಂಗ್ರೆಸ್ ಆರಂಭಿಸಿದೆ. ಈ ಘೋಷಣೆಯನ್ನು ಹೆಚ್ಚು ಪ್ರಚಲಿತಗೊಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಕ್ಷ ಹೇಳಿದೆ.

‘ನ್ಯಾಯ್‌ ಒಂದು ಕ್ರಾಂತಿಕಾರಕ ಯೋಜನೆ ಆಗಲಿದೆ. ಈ ಕ್ರಾಂತಿಯಲ್ಲಿ ನೀವೂ ಭಾಗಿಯಾಗಿ. ಯೋಜನೆಗೆ ಲೋಗೊ ರಚಿಸಿ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಅವಕಾಶ ಪಡೆಯಿರಿ’ ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ. ಲೋಗೊಗಳನ್ನು ಕಳುಹಿಸಲು ಮಾರ್ಚ್‌ 30 ಕೊನೆಯ ದಿನಾಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT