ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ | ಜಿ–23 ಮುಖಂಡರ ಜತೆ ಸಂಧಾನ?

ಸೋನಿಯಾ ಜತೆಗೆ ಗುಲಾಂ ನಬಿ ಆಜಾದ್‌ ಭೇಟಿ: ‘ಪಕ್ಷ ಪುನಶ್ಚೇತನ’ದ ಕುರಿತು ಚರ್ಚೆ
Last Updated 18 ಮಾರ್ಚ್ 2022, 21:40 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ‘ಭಿನ್ನಮತೀಯ ಗುಂಪು’ ಜಿ–23ರ ಮುಖಂಡ ಗುಲಾಂ ನಬಿ ಆಜಾದ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶುಕ್ರವಾರ ಭೇಟಿಯಾಗಿದ್ದಾರೆ. ಈ ಗುಂಪಿನ ಸದಸ್ಯರು ಪಕ್ಷದ ಪುನಶ್ಚೇತನಕ್ಕೆ ಸಂಬಂಧಿಸಿ ಹಲವು ಸುತ್ತು ಸಭೆ ನಡೆಸಿದ ಬಳಿಕ ಆಜಾದ್‌–ಸೋನಿಯಾ ಭೇಟಿ ನಡೆದಿದೆ.

ಜಿ–23 ಗುಂಪನ್ನು ಸಮಾಧಾನಪಡಿಸಲು ಗಾಂಧಿ ಕುಟುಂಬವು ನಡೆಸಿದ ಪ್ರಯತ್ನದ ಭಾಗವಾಗಿ ಈ ಭೇಟಿ ನಡೆದಿದೆ ಎನ್ನಲಾಗಿದೆ. ಸೋನಿಯಾ ಅವರು ಆಜಾದ್‌ ಅವರ ಜತೆಗೆ ಎರಡು ದಿನಗಳ ಹಿಂದೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು.

ಕಾಂಗ್ರೆಸ್‌ಗೆ ಎಲ್ಲರನ್ನೂ ಒಳಗೊಂಡ ಸಾಮೂಹಿಕ ನಾಯಕತ್ವ ಅಗತ್ಯ ಎಂದು ಜಿ–23 ಗುಂಪಿನ ಮುಖಂಡರು ಪ್ರತಿಪಾದಿಸುತ್ತಿದ್ದಾರೆ. ಅದಾದ ಬಳಿಕ, ಗುಂಪಿನ ಸದಸ್ಯರಲ್ಲಿ ಒಬ್ಬರಾದ ಭೂಪಿಂದರ್‌ ಸಿಂಗ್‌ ಹೂಡಾ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಗುರುವಾರ ಭೇಟಿಯಾಗಿದ್ದರು. ಪಕ್ಷದ ಪುನರ್‌ ರಚನೆಗೆ ಸಂಬಂಧಿಸಿ ಈ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪಕ್ಷವನ್ನು ಪುನರ್‌ ರಚಿಸಬೇಕು ಎಂಬುದು ಭಿನ್ನಮತೀಯ ಗುಂಪಿನ ಪ್ರಮುಖ ಬೇಡಿಕೆಯಾಗಿದೆ.

ಮುಂಬರುವ ಚುನಾವಣೆಗಳನ್ನು ಹೇಗೆ ಒಗ್ಗಟ್ಟಿನಿಂದ ಎದುರಿಸಬೇಕು ಮತ್ತು ಪಕ್ಷವನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು ಎಂದು ಆಜಾದ್‌ ಅವರು ಭೇಟಿಯ ಬಳಿಕ ಹೇಳಿದ್ದಾರೆ.

‘ಸೋನಿಯಾ ಜತೆಗಿನ ಮಾತುಕತೆ ಉತ್ತಮವಾಗಿತ್ತು. ನಾಯಕತ್ವದ ಪ್ರಶ್ನೆ ಬರಲೇ ಇಲ್ಲ. ಸೋನಿಯಾ ಅವರು ರಾಜೀನಾಮೆ ನೀಡುವುದಾಗಿ ಹೇಳಿದ್ದಾಗ, ಅಧ್ಯಕ್ಷೆಯಾಗಿ ಮುಂದುವರಿಯುವಂತೆ ನಾವೆಲ್ಲರೂ ಒತ್ತಾಯಿಸಿದ್ದೆವು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ಬಳಿಕವಷ್ಟೇ ಯಾವುದೇ ಬದಲಾವಣೆ ಸಾಧ್ಯ. ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಪಕ್ಷದ ಅಧ್ಯಕ್ಷ ಸ್ಥಾನ ಈಗ ಖಾಲಿ ಇಲ್ಲ’ ಎಂದು ಆಜಾದ್‌ ಹೇಳಿದ್ದಾರೆ.

ಕಾಂಗ್ರೆಸ್‌ನ ಹಿರಿಯ ಮುಖಂಡ ಕರಣ್‌ ಸಿಂಗ್‌ ಅವರನ್ನು ಆಜಾದ್‌ ಅವರು ಶುಕ್ರವಾರ ಭೇಟಿಯಾಗಿದ್ದಾರೆ. ಕರಣ್‌ ಸಿಂಗ್‌ ಅವರು ಗಾಂಧಿ ಕುಟುಂಬದ ನಿಕಟವರ್ತಿ. ರಾಜ್ಯಸಭೆಯಿಂದ ನಿವೃತ್ತರಾದ ಬಳಿಕ ಅವರು ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ.

ಜಿ–23 ಗುಂಪಿನ 18 ಸದಸ್ಯರು ಆಜಾದ್‌ ಅವರ ನಿವಾಸದಲ್ಲಿ ಬುಧವಾರ ಸಭೆ ಸೇರಿದ್ದರು. ಕಾಂಗ್ರೆಸ್‌ ಪಕ್ಷದ ನಿರ್ಧಾರ ಕೈಗೊಳ್ಳುವ ಎಲ್ಲ ಹಂತಗಳಲ್ಲಿ ಸಾಮೂಹಿಕ ಮತ್ತು ಎಲ್ಲರನ್ನೂ ಒಳಗೊಂಡ ನಾಯಕತ್ವ ಬೇಕು ಎಂಬ ಬೇಡಿಕೆಯನ್ನು ಈ ನಾಯಕರು ಮುಂದಿರಿಸಿದ್ದರು.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತ ಬಳಿಕ ನಾಯಕತ್ವ ಬದಲಾಗಬೇಕು ಎಂಬ ಕೂಗು ಬಲವಾಗಿದೆ. ಸೋಲಿನ ಬಳಿಕ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ನಡೆದಿತ್ತು. ಪಕ್ಷದ ಸಂಘಟನೆಯಲ್ಲಿ ಅಗತ್ಯ ಬದಲಾವಣೆ ತರುವ ಜವಾಬ್ದಾರಿಯನ್ನು ಈ ಸಭೆಯು ಸೋನಿಯಾ ಅವರಿಗೆ ನೀಡಿತ್ತು.

ಪಕ್ಷವನ್ನು ದುರ್ಬಲಗೊಳಿಸುವುದು ಅಥವಾ ಹುದ್ದೆಗಳಿಗೆ ಬೇಡಿಕೆ ಇರಿಸುವುದು ತಮ್ಮ ಉದ್ದೇಶ ಅಲ್ಲ ಎಂಬುದನ್ನು ಜಿ–23 ಗುಂಪಿನ ನಾಯಕರು ಪಕ್ಷದ ನಾಯಕತ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಪಕ್ಷದ ನಾಯಕತ್ವ ಬದಲಾಗಬೇಕು ಎಂದು ಜಿ–23 ಗುಂಪಿನಲ್ಲಿ ಇರುವ ಕಪಿಲ್‌ ಸಿಬಲ್‌ ಮತ್ತು ಮನೀಶ್‌ ತಿವಾರಿ ಹೇಳಿದ್ದರು.

ಹೂಡಾ ಬೇಡಿಕೆ
ರಾಹುಲ್‌ ಅವರ ಜತೆಗೆ ಭೂಪಿಂದರ್ ಸಿಂಗ್‌ ಹೂಡಾ ಅವರು ನೇರವಾಗಿ ಮತ್ತು ದೂರವಾಣಿ ಮೂಲಕ ಗುರುವಾರ ಮಾತುಕತೆ ನಡೆಸಿದ್ದಾರೆ. ತಮ್ಮ ತವರು ರಾಜ್ಯ ಹರಿಯಾಣದಲ್ಲಿ ಪ‍ಕ್ಷ ಸಂಘಟನೆಯನ್ನು ಪುನರ್‌ರಚಿಸಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿದೆ. ಈಗ ರಾಜ್ಯ ಘಟಕದ ಅಧ್ಯಕ್ಷೆಯಾಗಿರುವ ಕುಮಾರಿ ಶೆಲ್ಜಾ ಅವರನ್ನು ಬದಲಾಯಿಸಿ ತಮಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬೇಡಿಕೆಗೆ ನಾಯಕತ್ವವು ಮನ್ನಣೆ ನೀಡಲಿದೆಯೇ ಎಂಬುದು ಸ್ಪಷ್ಟವಿಲ್ಲ. ಆದರೆ, ಭೂಪಿಂದರ್ ಅವರ ಮಗ, ರಾಜ್ಯಸಭಾ ಸದಸ್ಯ ದೀಪೆಂದರ್‌ ಹೂಡಾ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

*

ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ನಾಯಕರು, ಕಾರ್ಯಕರ್ತರು ದಿಗಿಲುಗೊಳ್ಳುವ ಅಗತ್ಯ ಇಲ್ಲ. ಬಿಜೆಪಿ, ಇತರ ಪಕ್ಷಗಳು ಬರುತ್ತವೆ, ಹೋಗುತ್ತವೆ. ಕಾಂಗ್ರೆಸ್‌ ಮಾತ್ರ ಇಲ್ಲಿ ಉಳಿಯಲಿದೆ.
-ವೀರಪ್ಪ ಮೊಯಿಲಿ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT