ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಪಂಚ ಗ್ಯಾರಂಟಿ | ಉದ್ಯೋಗದ ಭರವಸೆ; ಯುವ ಮತದಾರರ ಸೆಳೆಯಲು ತಂತ್ರ

Published 7 ಮಾರ್ಚ್ 2024, 11:48 IST
Last Updated 7 ಮಾರ್ಚ್ 2024, 11:48 IST
ಅಕ್ಷರ ಗಾತ್ರ

ಜೈಪುರ: ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ 30 ಲಕ್ಷ ಹುದ್ದೆಗಳ ಭರ್ತಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಾನೂನು, ಡಿಪ್ಲೊಮಾ-ಪದವೀಧರರಿಗೆ ಶಿಷ್ಯವೇತನ ಸಹಿತ ಅಪ್ರೆಂಟಿಸ್‌ಷಿಪ್‌, ಗಿಗ್‌ ಕಾರ್ಮಿಕರ ಭದ್ರತೆಗೆ ಕಾನೂನು ಸೇರಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಿಸಿದರು.

ಲೋಕಸಭಾ ಚುನಾವಣೆಗೂ ಮುನ್ನ ಯುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಈ ಭರವಸೆಗಳನ್ನು ನೀಡಿದರು. ರಾಜಸ್ಥಾನದ ಬಾನ್ಸ್‌ವಾಢದಲ್ಲಿ ಗುರುವಾರ ‘ಭಾರತ ಜೋಡೊ ನ್ಯಾಯ ಯಾತ್ರೆ’ಯ ಭಾಗವಾಗಿ ನಡೆದ ರ್‍ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಜತೆಯಲ್ಲಿದ್ದರು. 

ಹುದ್ದೆಗಳ ಭರ್ತಿಗೆ ಭರವಸೆ: ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆದ್ಯತೆ ಮೇರೆಗೆ ಯುವ ಜನರಿಗೆ 30 ಲಕ್ಷ ಉದ್ಯಾಗಾವಕಾಶಗಳನ್ನು ಒದಗಿಸಲಾಗುವುದು. ಇದು ನಮ್ಮ ‘ಭರ್ತಿ ಭರವಸೆ’. ನೇಮಕಾತಿ ಸಲುವಾಗಿ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗುವುದು. ಖಾಲಿ ಹುದ್ದೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು. ದೇಶದಲ್ಲಿ ಸರ್ಕಾರಿ ವಲಯದಲ್ಲಿ 30 ಲಕ್ಷ ಹುದ್ದೆಗಳು ಖಾಲಿಯಿದ್ದು, ಅವುಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ರಾಹುಲ್‌ ತಿಳಿಸಿದರು. 

ಅಪ್ರೆಂಟಿಸ್‌ಷಿಪ್‌ ಭರವಸೆ: ‘ಡಿಪ್ಲೊಮಾ ಮತ್ತು ಪದವೀಧರರಿಗೆ ತಾವು ಉತ್ತೀರ್ಣರಾದ ಮೊದಲ ವರ್ಷದಲ್ಲಿ ಸರ್ಕಾರಿ ಅಥವಾ ಖಾಸಗಿ ವಲಯಗಳಲ್ಲಿ ಕನಿಷ್ಠ ಒಂದು ವರ್ಷ ಅಪ್ರೆಂಟಿಸ್‌ಷಿಪ್‌ಗೆ ಅವಕಾಶ ಒದಗಿಸುವ ಭರವಸೆಯನ್ನು ಕಾಂಗ್ರೆಸ್‌ ನೀಡುತ್ತಿದೆ. ಈ ಮೂಲಕ 25 ವರ್ಷದೊಳಗಿನವರು ತಿಂಗಳಿಗೆ ₹ 8,500 ಅಥವಾ ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿ ಆದಾಯಗಳಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು. ಈ ಗ್ಯಾರಂಟಿಯನ್ನು ಅವರು ‘ಪೆಹ್ಲಿ ನೌಕ್ರಿ ಪಕ್ಕಿ’ ಎಂದು ಕರೆದರು. ಅಪ್ರೆಂಟಿಸ್‌ಷಿಪ್‌ ಅವಕಾಶವನ್ನು ಖಚಿತಪಡಿಸಲು ‘ನರೇಗಾ’ ಮಾದರಿಯಲ್ಲಿ ಕಾನೂನು ತರುವುದಾಗಿಯೂ ಭರವಸೆ ನೀಡಿದರು. 

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕ್ರಮ: ‌ಪ್ರಶ್ನೆಪತ್ರಿಕೆಗಳ ಸೋರಿಕೆ ವಿರುದ್ಧ ಕಠಿಣ ಕಾನೂನನ್ನು ತರುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಸೋರಿಕೆಗೆ ಅವಕಾಶ ನೀಡದಂತೆ ಪರೀಕ್ಷೆಗಳನ್ನು ನಡೆಸಲಾಗುವುದು ಮತ್ತು ಪರೀಕ್ಷಾ ಕಾರ್ಯಗಳನ್ನು ಹೊರಗುತ್ತಿಗೆಗೆ ನೀಡದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಇವುಗಳ ಹೊರತಾಗಿಯೂ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು. 

ಗಿಗ್‌ ಕಾರ್ಮಿಕರಿಗೆ ಭದ್ರತೆಯ ಗ್ಯಾರಂಟಿ: ಲಕ್ಷಾಂತರ ಯುವ ಜನರು ಗಿಗ್‌ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಥಿಕತೆ ಬೆಳವಣಿಗೆಯ ಭಾಗವಾಗಿರುವ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಉತ್ತಮ ಕೆಲಸದ ವಾತಾವರಣ ನಿರ್ಮಿಸುವ ಸಲುವಾಗಿ ಕಾನೂನು ಜಾರಿಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

₹ 5,000 ಕೋಟಿ ‘ಕಾರ್ಪಸ್‌ ನಿಧಿ’: ‘ಸ್ಟಾರ್ಟ್‌ಅಪ್‌’ಗಳಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗಾಗಿ ₹ 5,000 ಕೋಟಿ ‘ಕಾರ್ಪಸ್‌ ನಿಧಿ’ ಇಡಲಾಗುವುದು ಎಂದು ರಾಹುಲ್‌ ಆಶ್ವಾಸನೆ ನೀಡಿದರು. ಐದು ವರ್ಷಗಳವರೆಗೆ ದೇಶದ ಎಲ್ಲ ಜಿಲ್ಲೆಗಳ ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು. 40 ವರ್ಷದೊಳಗಿನವರು ಯಾವುದೇ ಕ್ಷೇತ್ರದಲ್ಲಿ ತಮ್ಮ ವ್ಯಾಪಾರ, ಉದ್ಯಮಗಳಿಗಾಗಿ ‘ಸ್ಟಾರ್ಟ್‌ಅಪ್‌’ ನಿಧಿಯನ್ನು ಪಡೆಯಲು ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.  

ಚುನಾವಣಾ ಆಯೋಗದ ಪ್ರಕಾರ, ದೇಶದಲ್ಲಿನ 96.88 ಕೋಟಿ ಮತದಾರರ ಪೈಕಿ ಎರಡು ಕೋಟಿ ಮತದಾರರು 18–29 ವರ್ಷದೊಳಗಿನವರಾಗಿದ್ದಾರೆ. ಈ ಗ್ಯಾರಂಟಿಗಳ ಮೂಲಕ ಯುವ ಮತದಾರರನ್ನು ಸೆಳೆಯುವುದು ಕಾಂಗ್ರೆಸ್‌ನ ಯತ್ನವಾಗಿದೆ.

ನಿರುದ್ಯೋಗ ಭತ್ಯೆಯ ರೂಪದಲ್ಲಿ ಯುವಕರಿಗೆ ಸ್ವಲ್ಪ ಹಣ ನೀಡುವುದರ ಬದಲಿಗೆ ನೈಪುಣ್ಯ ಘನತೆ ಮತ್ತು ಉದ್ಯೋಗಾವಕಾಶಗಳನ್ನು ಹಕ್ಕನ್ನಾಗಿಸಲಾಗುವುದು. ಶಿಷ್ಯವೇತನವನ್ನೂ ಕಡ್ಡಾಯಗೊಳಿಸಲಾಗುವುದು.
–ಪ್ರವೀಣ್‌ ಚಕ್ರವರ್ತಿ, ಪ್ರಣಾಳಿಕೆ ಸಮಿತಿ ಸದಸ್ಯ

‘ವ್ಯಾಪಕ ಸಮಾಲೋಚನೆ’

‘ಅಪ್ರೆಂಟಿಸ್‌ಷಿಪ್‌ ಹಕ್ಕು ಕಾಯ್ದೆ’ ಜಾರಿ ಕುರಿತು ಗ್ಯಾರಂಟಿ ನೀಡಿರುವ ಕಾಂಗ್ರೆಸ್‌ ಈ ಕುರಿತು ಎಂಎಸ್‌ಎಂಇ ವಲಯದ ತಜ್ಞರು ಆರ್ಥಿಕ ತಜ್ಞರು ನೀತಿ ನಿರೂಪಕರು ಮತ್ತು ಉದ್ಯಮಿಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದೆ ಎಂದು ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಸದಸ್ಯ ಪ್ರವೀಣ್‌ ಚಕ್ರವರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಪ್ರೆಂಟಿಸ್‌ಷಿಪ್‌ ಹಕ್ಕು ಕಾಯ್ದೆಯು ಬಹುತೇಕ ಕೌಶಲ ಮತ್ತು ಉದ್ಯೋಗದ ಹಕ್ಕಿನಂತೆಯೇ ಇರುತ್ತದೆ. ಇದನ್ನು ಕಾನೂನುಬದ್ಧವಾಗಿ ಖಾತರಿಪಡಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಒಬ್ಬರು ಮಾತನಾಡಿದ್ದಾರೆ. ಇದು ನಿರುದ್ಯೋಗ ಭತ್ಯೆಯಂತಲ್ಲ. ಬದಲಿಗೆ ಕೌಶಲ ಘನತೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ್ದಾಗಿದೆ’ ಎಂದು ಅವರು ವಿವರಿಸಿದರು.

ಇಲ್ಲಿ ಯುವ ಜನರಿಗೆ ಕೌಶಲ ಉದ್ಯೋಗದ ಜತೆಗೆ ಶಿಷ್ಯವೇತನ ದೊರೆಯುತ್ತದೆ. ಇದನ್ನು ಉದ್ಯೋಗದಾತರು ಮತ್ತು ಸರ್ಕಾರ ಹಂಚಿಕೊಳ್ಳುತ್ತದೆ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT