ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ನಾಯಕರೆಂದರೆ ಕಾಂಗ್ರೆಸ್‌ಗೆ ಭಯ: ಕುಟುಂಬ ರಾಜಕಾರಣದ ವಿರುದ್ಧ ಮೋದಿ ವಾಗ್ದಾಳಿ

Published 5 ಮಾರ್ಚ್ 2024, 15:31 IST
Last Updated 5 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ಸಂಗಾರೆಡ್ಡಿ (ತೆಲಂಗಾಣ): ‘ಯುವ ನಾಯಕರನ್ನು ಮುಂಚೂಣಿಗೆ ತರಲು ಹೆದರುತ್ತಿರುವ ಕಾಂಗ್ರೆಸ್ ಪಕ್ಷವು ಇದಕ್ಕಾಗಿ 75ರಿಂದ 80 ವರ್ಷ ಮೀರಿದವರನ್ನು ನೇಮಿಸುತ್ತಿದೆ’ ಎಂದು ವಾಗ್ದಾಳಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದ ಅವರು, ಬಳಿಕ ಬಿಜೆಪಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. 

‘ಸಹಸ್ರಾರು ಕೋಟಿ ರೂಪಾಯಿಯ ಹಗರಣಗಳನ್ನು ಬಹಿರಂಗಪಡಿಸುತ್ತಿರುವ ಕಾರಣ ಕುಟುಂಬ ರಾಜಕಾರಣ ನಡೆಸುತ್ತಿರುವ ಪಕ್ಷಗಳು ತಮ್ಮನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿವೆ ಎಂದು ಅವರು ದೂರಿದರು.

‘ನಾನು ಯಾವುದೇ ರೀತಿಯ ವೈಯಕ್ತಿಕ ದಾಳಿ ಮಾಡಿಲ್ಲ, ಆದರೆ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದೇನೆ’ ಎಂದರು.

‘ಕುಟುಂಬ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಅದು ಯುವ ಸಮಯದಾಯಕ್ಕೆ ಹೊಸ ಅವಕಾಶಗಳನ್ನು ವಂಚಿಸುತ್ತದೆ ಎಂದು ನಾನು ಹೇಳಿದರೆ, ಅದಕ್ಕೆ ಪ್ರತಿಕ್ರಿಯಿಸದ ವಿರೋಧ ಪಕ್ಷಗಳು ಮೋದಿಯವರಿಗೆ ಕುಟುಂಬವಿಲ್ಲ ಎಂದು ಜರಿಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಹಿಂದೆ ಕಾಂಗ್ರೆಸ್ ಕುಟುಂಬ ರಾಜಕಾರಣದ ಪಕ್ಷವಾಗಿರಲಿಲ್ಲ. ಆದರೆ ಈಗ ಅದು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬಡ್ತಿಯನ್ನೇ ನೀಡುತ್ತಿಲ್ಲ. ಯಾರನ್ನಾದರೂ ಪ್ರಮುಖ ಸ್ಥಾನಗಳಿಗೆ ನೇಮಿಸಬೇಕಾದರೆ 75- 80 ಮತ್ತು 85 ವರ್ಷ ಮೀರಿದವರನ್ನು ನೇಮಿಸುತ್ತಿದೆ. 50 ವರ್ಷದೊಳಗಿನವರು ಬಂದರೆ ತಮ್ಮ ಕುಟುಂಬವನ್ನು ಹಿಂದಿಕ್ಕುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿದೆ’ ಎಂದು ಮೋದಿ ಕಟುಕಿದರು.

ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ತಮಿಳುನಾಡಿನವರೆಗೆ ಎಲ್ಲೆಲ್ಲಿ ಕುಟುಂಬ ಕೇಂದ್ರಿತ ಪಕ್ಷಗಳು ಆಡಳಿತ ನಡೆಸುತ್ತಿವೆಯೋ ಅಲ್ಲೆಲ್ಲ ರಾಜ್ಯಗಳು ಹಾಳಾಗಿವೆ, ಬದಲಿಗೆ ಆ ಕುಟುಂಬಗಳು ಪ್ರಬಲವಾಗಿವೆ. ಈ ರೀತಿ ಕುಟುಂಬ ರಾಜಕೀಯವನ್ನು ಮುಂದುವರಿಸಲು ಬಿಡಬೇಕೇ? ಎಂದು ಮೋದಿ ಪ್ರಶ್ನಿಸಿದರು.

‘ನನಗೆ ದೇಶವೇ ಮೊದಲು’: ‘ಮೋದಿ ಅವರೊಂದಿಗೆ ಸೈದ್ಧಾಂತಿಕ ಹೋರಾಟವಿದೆ ಎನ್ನುವ ಅವರು, ಕುಟುಂಬ ರಾಜಕಾರಣವೇ ಮೊದಲು ಎಂದು ಏಕೆ ಹೇಳುತ್ತಾರೆ. ಆದರೆ ನನಗೆ ದೇಶವೇ ಮೊದಲು’ ಎಂದು ಮೋದಿ ಹೇಳಿದರು.

‘ಅವರಿಗೆ ಕುಟುಂಬವೇ ಸರ್ವಸ್ವವಾದರೆ, ನನಗೆ ದೇಶದ ಪ್ರತಿಯೊಂದು ಕುಟುಂಬವೂ ಸರ್ವಸ್ವ. ಅವರು ಕುಟುಂಬದ ಯೋಗಕ್ಷೇಮಕ್ಕಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಡುತ್ತಾರೆ. ಆದರೆ ನಾವು ದೇಶದ ಹಿತಾಸಕ್ತಿಗಾಗಿ ನನ್ನನ್ನು ಅರ್ಪಿಸಿಕೊಂಡಿದ್ದೇವೆ. ಅವರು ದೇಶವನ್ನು ಲೂಟಿ ಮಾಡಿದರು, ಆದರೆ ನಾನು ಅವಕಾಶ ಸಿಕ್ಕಾಗೆಲ್ಲ ವೇತನವನ್ನು ಜನರಿಗಾಗಿ ಖರ್ಚು ಮಾಡಿದ್ದೇನೆ’ ಎಂದರು.

ಸರ್ಕಾರದಲ್ಲಿದ್ದಾಗ ಈ ‘ಪರಿವಾರವಾದಿಗಳು’ ಉಡುಗೊರೆಗಳನ್ನು ಸ್ವೀಕರಿಸಿ, ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುತ್ತಾರೆ. ಆದರೆ ನಾನು ಪಡೆದ ಉಡುಗೊರೆಗಳನ್ನು ‘ತೋಷಖಾನ’ದಲ್ಲಿ ಇಟ್ಟಿದ್ದೇನೆ. ಪರಿವಾರವಾದಿಗಳು ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯುತ್ತಾರೆ, ಆದರೆ ನಾನು ಕೋಟಿಗಟ್ಟಲೆ ಜನಸಾಮಾನ್ಯರಿಗೆ ‘ಜನ್‌ಧನ್‌’ ಖಾತೆಗಳನ್ನು ತೆರೆಸಿದ್ದೇನೆ ಎಂದು ಹೇಳಿದರು. 

‘140 ಕೋಟಿ ಜನರು ನನ್ನ ಪರಿವಾರ’: ಪರಿವಾರವಾದಿಗಳು ತಮ್ಮ ಕುಟುಂಬಗಳಿಗಾಗಿ ‘ಮಹಲ್‌’ (ಅರಮನೆ)ಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ನಾನು ಇಂದಿಗೂ ನನಗಾಗಿ ಒಂದು ಮನೆಯನ್ನೂ ಕಟ್ಟಿಕೊಂಡಿಲ್ಲ. ನಾನು ರಾಷ್ಟ್ರ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಕಾರಣ, ಅವರು ನನಗೆ ಸಂಸಾರವಿಲ್ಲ ಎಂದು ಜರಿದಿದ್ದಾರೆ. ಆದರೆ ದೇಶದ 140 ಕೋಟಿ ದೇಶವಾಸಿಗಳು ನನ್ನ ಕುಟುಂಬದ ಸದಸ್ಯರು ಎಂಬುದನ್ನು ಅವರು ಮರೆತಿದ್ದಾರೆ ಎಂದು ಮೋದಿ ಟೀಕಿಸಿದರು. 

‘ದೇಶದ ಕೋಟ್ಯಂತರ ಜನರು ನನ್ನನ್ನು ತಮ್ಮ ಕುಟುಂಬದ ಸದಸ್ಯ ಎಂದು ಪರಿಗಣಿಸುತ್ತಾರೆ ಎಂಬುದನ್ನು ಕಾಂಗ್ರೆಸ್‌ ಮತ್ತು ‘ಇಂಡಿಯಾ’ ಮೈತ್ರಿಕೂಟದ ಜನರು ಊಹಿಸಲೂ ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ ಪಕ್ಷವು ತೆಲಂಗಾಣವನ್ನು ತನ್ನ ಹೊಸ ಎಟಿಎಂ ಆಗಿ ಮಾಡಿಕೊಂಡಿದೆ ಎಂದೂ ಅವರು ದೂರಿದರು. ‘ಮುಂದಿನ ಕೆಲ ವರ್ಷಗಳಲ್ಲಿ ನಾವು ಭಾರತವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮಾಡಲು ಪಣತೊಟ್ಟಿದ್ದೇವೆ. ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂದು ಪ್ರಧಾನಿ ಮನವಿ ಮಾಡಿದರು.

ಮಹಾಕಾಳಿ ಬಳಿ ಪ್ರಾರ್ಥನೆ

ಸಿಕಂದರಾಬಾದಿನಲ್ಲಿ ಇರುವ ಉಜ್ಜಯಿನಿ ಮಹಾಕಾಳಿ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದ ಅರ್ಚಕರು ಮೋದಿ ಅವರಿಗೆ ದೇವಿಯ ಛಾಯಾಚಿತ್ರವನ್ನು ಉಡುಗೊರೆಯಾಗಿ ನೀಡಿದರು.

‘ಸಿಕಂದರಾಬಾದಿನ ಶ್ರೀ ಉಜ್ಜಯಿನಿ ಮಹಾಕಾಳಿ ದೇವಸ್ಥಾನದಲ್ಲಿ ಭಾರತೀಯರಿಗೆ ಉತ್ತಮ ಆರೋಗ್ಯ ಯೋಗಕ್ಷೇಮ ಮತ್ತು ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿದ್ದೇನೆ’ ಎಂದು ಪ್ರಧಾನಿ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ತಾವು ದೇವಾಲಯಕ್ಕೆ ಭೇಟಿ ನೀಡಿದ್ದ ಫೋಟೊಗಳನ್ನೂ ಅವರ ಹಂಚಿಕೊಂಡಿದ್ದಾರೆ. ಬಳಿಕ ಅವರು ಸಂಗಾರೆಡ್ಡಿಯಲ್ಲಿ ₹ 7200 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT