ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ನೂರಕ್ಕೇರಿದ ಕಾಂಗ್ರೆಸ್‌, ಜಿಂದ್‌ನಲ್ಲಿ ಬಿಜೆಪಿ ಗೆಲುವು

Last Updated 31 ಜನವರಿ 2019, 20:22 IST
ಅಕ್ಷರ ಗಾತ್ರ

ಜೈಪುರ್‌: ರಾಜಸ್ಥಾನದ ರಾಮಗಡ ವಿಧಾನಸಭಾ ಕ್ಷೇತ್ರ ಆಡಳಿತಾರೂಢ ಕಾಂಗ್ರೆಸ್‌ ಪಾಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಶಫಿಯಾ ಜುಬೇರ್‌ ಅವರು ಬಿಜೆಪಿಯ ಸುಖವಂತ್‌ ಸಿಂಗ್‌ ಅವರನ್ನು 12,228 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಈ ಗೆಲುವಿನೊಂದಿಗೆ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 100 ಸ್ಥಾನಗಳನ್ನು ಪಡೆದುಕೊಂಡಂತಾಗಿದೆ. 2013ರ ಚುನಾವಣೆಯಲ್ಲಿ ಈ ಕ್ಷೇತ್ರವು ಬಿಜೆಪಿ ಪಾಲಾಗಿತ್ತು.

ಹರಿಯಾಣದ ಜಿಂದ್‌ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಮಿಡ್ಢಾ 12,935 ಮತಗಳ ಅಂತರದಿಂದ ಜನನಾಯಕ ಜನತಾ ಪಕ್ಷದ (ಜೆಜೆಪಿ) ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ಚೌತಾಲಾ ಅವರನ್ನು ಸೋಲಿಸಿದ್ದಾರೆ.ಕೃಷ್ಣ ಅವರ ತಂದೆ,ಐಎನ್‌ಎಲ್‌ಡಿ ಶಾಸಕ ಹರಿಚಂದ್‌ ಮಿಡ್ಢಾ ಅವರು ನಿಧನವಾಗಿದ್ದರಿಂದ ಉಪ ಚುನಾವಣೆ ನಡೆಯಿತು.

ಜಿಂದ್‌ನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಕೈಥಾಲ್‌ ಕ್ಷೇತ್ರದ ಶಾಸಕ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮೂರನೇ ಸ್ಥಾನ ಪಡೆದಿದ್ದಾರೆ.

ರಾಮಗಡ ವಿಧಾನಸಭಾ ಕ್ಷೇತ್ರದಲ್ಲಿ ಶಫಿಯಾ ಅವರು ಶೇ 44.77 ರಷ್ಟು ಹಾಗೂ ಸುಖವಂತ್‌ ಅವರು ಶೇ 38.20 ರಷ್ಟು ಮತ ಪಡೆದಿದ್ದಾರೆ. ಕಣದಲ್ಲಿ ಒಟ್ಟು 20 ಅಭ್ಯರ್ಥಿಗಳಿದ್ದರು. ಕೇಂದ್ರದ ಮಾಜಿ ಸಚಿವ ನಟವರ್‌ ಸಿಂಗ್‌ ಅವರ ಪುತ್ರ ಹಾಗೂ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಜಗತ್‌ ಸಿಂಗ್‌ ಸೇರಿದಂತೆ 18 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ 7 ರಂದು ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಚುನಾವಣೆ ನಡೆದಿರಲಿಲ್ಲ. ಬಿಎಸ್‌ಪಿ ಅಭ್ಯರ್ಥಿ ಮೃತಪಟ್ಟಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT