ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಅಯೋಧ್ಯೆ ಸಜ್ಜು: ಧಾರ್ಮಿಕ ಆಚರಣೆಗೆ ಚಾಲನೆ

ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಡಗರದಿಂದ ಸಜ್ಜಾಗುತ್ತಿದೆ ಅಯೋಧ್ಯೆ
Published 16 ಜನವರಿ 2024, 15:57 IST
Last Updated 16 ಜನವರಿ 2024, 15:57 IST
ಅಕ್ಷರ ಗಾತ್ರ

ಅಯೋಧ್ಯೆ: ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ಪೂರ್ವಭಾವಿ ಧಾರ್ಮಿಕ ಆಚರಣೆಗಳಿಗೆ ಮಂಗಳವಾರ ಚಾಲನೆ ದೊರೆತಿದೆ. 

ಏಳು ದಿನಗಳ ಧಾರ್ಮಿಕ ವಿಧಿಗಳು ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಕೊನೆಗೊಳ್ಳಲಿದೆ. ‘11 ಮಂದಿ ಅರ್ಚಕರು ವಿವಿಧ ಆಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ತಿಳಿಸಿದರು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಅನಿಲ್ ಮಿಶ್ರಾ ಮತ್ತು ಅವರ ಪತ್ನಿ ಉಶಾ ಮಿಶ್ರಾ ಅವರು ಧಾರ್ಮಿಕ ವಿಧಿಗಳ ‘ಯಜಮಾನ’ ಸ್ಥಾನದಲ್ಲಿ ಇದ್ದಾರೆ. ಮಿಶ್ರಾ ಅವರು ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ಎಲ್ಲ ಆಚರಣೆಗಳಲ್ಲಿ ಪಾಲ್ಗೊಳ್ಳುವರು. ವಾರಾಣಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಧಾರ್ಮಿಕ ವಿಧಿಗಳ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. 

ಟ್ರಸ್ಟ್‌ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಮಂಗಳವಾರ ಸರಯೂ ತಟದಲ್ಲಿ ದಶವಿಧ ಸ್ನಾನ, ‘ಪ್ರಾಯಶ್ಚಿತ’ ಆಚರಣೆ ಮತ್ತು ‘ಕರ್ಮಕುಟಿ ಪೂಜೆ’ ನೆರವೇರಿದವು. ಪುರೋಹಿತರು ಸರಯೂ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಪೂಜಾ ಸಾಮಗ್ರಿಗಳೊಂದಿಗೆ ಇಲ್ಲಿನ ವಿವೇಕ ಸೃಷ್ಟಿ ಆಶ್ರಮಕ್ಕೆ ತೆರಳಿ ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಿದರು.

ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುವ ವಿಗ್ರಹವನ್ನು ಕೆತ್ತಿರುವ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರೂ ಇದರಲ್ಲಿ ಪಾಲ್ಗೊಂಡರು.

ಶಾಸ್ತ್ರೀಯ ಸಂಗೀತ ಕಾರ್ಯಕ್ರಮ: ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಉತ್ತರ ಪ್ರದೇಶದ ಪಖಾವಜ್‌ನಿಂದ ಹಿಡಿದು ಕರ್ನಾಟಕದ ವೀಣೆಯವರೆಗೆ ದೇಶದ ವಿವಿಧ ಭಾಗಗಳ ಶಾಸ್ತ್ರೀಯ ಸಂಗೀತ ವಾದ್ಯಗಳು ನಾದ ಹೊಮ್ಮಿಸಲಿವೆ.

‘ಪ್ರಾಣ ಪ್ರತಿಷ್ಠಾಪನೆಯ ದಿನ ಸಂಗೀತ ಕಾರ್ಯಕ್ರಮ ನೀಡಲು ದೇಶದ ವಿವಿಧ ಭಾಗಗಳ ಸಂಗೀತಗಾರರನ್ನು ಆಯ್ಕೆ ಮಾಡಲಾಗಿದೆ’ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದರು.

ಉತ್ತರ ಪ್ರದೇಶದ ಬಾನ್ಸುರಿ ಮತ್ತು ಡೊಳ್ಳು, ಮಹಾರಾಷ್ಟ್ರದ ಸುಂದರಿ, ಪಂಜಾಬ್‌ನ ಅಲ್ಗೋಜಾ, ಒಡಿಶಾದ ಮೃದಂಗ, ಮಧ್ಯಪ್ರದೇಶದ ಸಂತೂರ್, ಮಣಿಪುರದ ಪುಂಗ್, ಛತ್ತೀಸ್‌ಗಢದ ತಂಬೂರಿ, ದೆಹಲಿಯ ಶಹನಾಯ್, ಆಂಧ್ರ ಪ್ರದೇಶದ ಘಟಂ, ಜಾರ್ಖಂಡ್‌ನ ಸಿತಾರ್, ತಮಿಳುನಾಡಿನ ನಾದಸ್ವರಂ ಮತ್ತು ಮೃದಂಗ ಸೇರಿದಂತೆ ಹಲವು ವಾದ್ಯಗಳ ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಯಾವುದೇ ಧಾರ್ಮಿಕ ವಿಧಿಗಳು ನಡೆಯದ ಸಮಯದಲ್ಲಿ ಹಾಗೂ ಅತಿಥಿಗಳ ಭಾಷಣದ ಮಧ್ಯೆ ವಿರಾಮದ ಅವಧಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

108 ಅಡಿ ಉದ್ದದ ಅಗರಬತ್ತಿ!

ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯೆಯಲ್ಲಿ ಮಂಗಳವಾರ 108 ಅಡಿ ಉದ್ದದ ಅಗರಬತ್ತಿಯನ್ನು ಬೆಳಗಲಾಯಿತು. ನೂರಾರು ಭಕ್ತರ ‘ಜೈಶ್ರೀರಾಮ್’ ಘೋಷಣೆಯ ನಡುವೆ ಟ್ರಸ್ಟ್‌ ಅಧ್ಯಕ್ಷ ಮಹಂತ ನೃತ್ಯ ಗೋಪಾಲ ದಾಸ್ ಅವರು ಅಗರಬತ್ತಿಯನ್ನು ಬೆಳಗಿದರು. ಈ ದೈತ್ಯ ಅಗರಬತ್ತಿ ಹೊರಸೂಸುವ ಸುಗಂಧ ಸುಮಾರು 50 ಕಿ.ಮೀ.ವರೆಗೂ ತಲುಪಲಿದೆ ಎಂದು ಹೇಳಲಾಗಿದೆ. ಒಂದೂವರೆ ತಿಂಗಳು ನಿರಂತರ ಪರಿಮಳ ಸೂಸುವ ಅಗರಬತ್ತಿ 3610 ಕೆ.ಜಿ ತೂಕ ಹೊಂದಿದೆ. ಗುಜರಾತ್‌ನ ವಡೋದರದ ದಾನಿಗಳು ಇದನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಗಣಿ ತುಪ್ಪ ಗಿಡಮೂಲಿಕೆಗಳು ಮತ್ತು ಸುಗಂದ ದ್ರವ್ಯ ಬಳಸಿ ಅಗರಬತ್ತಿ ತಯಾರಿಸಲಾಗಿದೆ. 

  • ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಕೊನೆಯಲ್ಲಿ ಪ್ರಧಾನಿ ಮೋದಿ ಅವರಿಂದ ಭಾಷಣ

  • 8000 ಆಹ್ವಾನಿತರಿಗೆ ಆಸನ ವ್ಯವಸ್ಥೆ ಮಾಡಿರುವುದಾಗಿ ಹೇಳಿರುವ ಟ್ರಸ್ಟ್‌

  • ಆಗ್ರಾ ವಾಣಿಜ್ಯ ಮಂಡಳಿ ವತಿಯಿಂದ 560 ಕೆ.ಜಿಯಷ್ಟು ಆಗ್ರಾ ‘ಪೇಠಾ’ವನ್ನು (ಮಿಠಾಯಿ) ಮಂಗಳವಾರ ಅಯೋಧ್ಯೆಗೆ ತಲುಪಿಸಲಾಯಿತು

  • ಭದ್ರತೆಯ ದೃಷ್ಟಿಯಿಂದ ಅಯೋಧ್ಯೆ ಜಿಲ್ಲೆಯಾದ್ಯಂತ 10 ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ 

  • ಜನವರಿ 22ರಂದು ಕೋಲ್ಕತ್ತದಲ್ಲಿ ಎಲ್ಲ ಧರ್ಮಗಳ ಜನರೊಂದಿಗೆ ‘ಸಾಮರಸ್ಯ ರ್‍ಯಾಲಿ’ ಆಯೋಜಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT