ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಯಸಾಚಿ ಜಾಹೀರಾತು ವಿವಾದ: ಪುನರಾವರ್ತನೆಯಾದರೆ ನೇರ ಕ್ರಮ- ನರೋತ್ತಮ್ ಮಿಶ್ರಾ

Last Updated 2 ನವೆಂಬರ್ 2021, 6:12 IST
ಅಕ್ಷರ ಗಾತ್ರ

ಭೋಪಾಲ್: ವಿವಾದಕ್ಕೆ ಕಾರಣವಾಗಿದ್ದ ಪ್ರತ್ಯೇಕ ಜಾಹೀರಾತುಗಳನ್ನು ಡಿಸೈನರ್ ಬ್ರಾಂಡ್ ಸಬ್ಯಸಾಚಿ ಮತ್ತು ಡಾಬರ್ ಇಂಡಿಯಾ ಹಿಂತೆಗೆದುಕೊಂಡಿವೆ. ಈ ಹಿಂದೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಇದು ಮತ್ತೊಮ್ಮೆ ಪುನರಾವರ್ತನೆಯಾದರೆ ಎಚ್ಚರಿಕೆ ನೀಡದೆ ನೇರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಡಾಬರ್ ಮತ್ತು ಸಬ್ಯಸಾಚಿಯ ವಿವಾದಾತ್ಮಕ ಜಾಹೀರಾತುಗಳನ್ನು ಉಲ್ಲೇಖಿಸಿದ ಮಿಶ್ರಾ, ಅವುಗಳನ್ನು ಮೊದಲ ಬಾರಿಗೆ ಮಾಡಿದ 'ತಪ್ಪು' ಎಂದು ಪರಿಗಣಿಸುತ್ತಿರುವುದಾಗಿ ಹೇಳಿದರು.

'ಆಕ್ಷೇಪಾರ್ಹ ಮತ್ತು ಅಶ್ಲೀಲತೆಯಿಂದ ಕೂಡಿರುವ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಮಧ್ಯ ಪ್ರದೇಶದ ಗೃಹ ಸಚಿವರು ನರೋತ್ತಮ್ ಮಿಶ್ರಾ ಅವರು, ಸಬ್ಯಸಾಚಿ ಮುಖರ್ಜಿ ಅವರಿಗೆ 24 ಗಂಟೆಗಳ ಗಡುವು ನೀಡಿದ್ದರು. ಇದಾದ ಕೆಲವೇ ಗಂಟೆಗಳ ನಂತರ, ಜಾಹೀರಾತು ಸಮಾಜದ ಒಂದು ವರ್ಗಕ್ಕೆ ನೋವುಂಟು ಮಾಡಿರುವುದರಿಂದ ನಮಗೆ 'ತೀವ್ರ ದುಃಖವಾಗಿದೆ' ಎಂದಿದ್ದ ಸಬ್ಯಸಾಚಿ ಭಾನುವಾರ ತನ್ನ ಮಂಗಳಸೂತ್ರ ಜಾಹೀರಾತನ್ನು ಎಲ್ಲ ಕಡೆಯಿಂದಲೂ ಹಿಂತೆಗೆದುಕೊಂಡಿತ್ತು.

ಜಾಹೀರಾತಿನಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಮಹಿಳೆಯೊಬ್ಬರು ಮಂಗಳಸೂತ್ರವನ್ನು ಧರಿಸಿ ಪುರುಷನೊಂದಿಗೆ ನಿಂತಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

'ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ನಾನು ಸಬ್ಯಸಾಚಿ ಮುಖರ್ಜಿ ಅವರಿಗೆ ಹೇಳಿದ ನಂತರ ಅವರು ತಮ್ಮ ಜಾಹೀರಾತನ್ನು ಹಿಂಪಡೆದಿದ್ದಾರೆ. ಅಲ್ಲಿಗೆ ಈ ವಿಚಾರ ಮುಗಿಯಿತು. ಡಾಬರ್ ಆಗಲಿ ಅಥವಾ ಸಬ್ಯಸಾಚಿಯಾಗಲಿ ಈಗ ಮಾಡಿರುವುದು ಮೊದಲ ಬಾರಿಗೆ ಆದ ತಪ್ಪು ಎಂದು ನಾವು ಪರಿಗಣಿಸಿದ್ದೇವೆ. ಇದು ಪುನರಾವರ್ತನೆಯಾದಲ್ಲಿ ಎಚ್ಚರಿಕೆ ನೀಡದೆಯೇ ನೇರವಾಗಿ ಕ್ರಮ ಕೈಗೊಳ್ಳಲಾಗುವುದು' ಎಂದು ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.

'ಜನರ ಭಾವನೆಗಳು ಮತ್ತು ನಂಬಿಕೆಯನ್ನು ನೋಯಿಸಬೇಡಿ ಎಂದು ನಾನು ಅವರಿಗೆ (ಡಾಬರ್ ಮತ್ತು ಸಬ್ಯಸಾಚಿ) ಮನವಿ ಮಾಡುತ್ತೇನೆ' ಎಂದು ಅವರು ಹೇಳಿದರು.

ಕಳೆದ ವಾರವಷ್ಟೇ, ಹಿಂದೂ ಚಿಹ್ನೆಗಳನ್ನು ಅವಮಾನಿಸಿದಕ್ಕಾಗಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮಿಶ್ರಾ ಎಚ್ಚರಿಸಿದ ನಂತರ ಡಾಬರ್ ಇಂಡಿಯಾ ತನ್ನ ಫೆಮ್ ಕ್ರೀಮ್ ಬ್ಲೀಚ್ ಜಾಹೀರಾತನ್ನು ಹಿಂತೆಗೆದುಕೊಂಡಿತ್ತು. ಇದರಲ್ಲಿ 'ಲೆಸ್ಬಿಯನ್' ದಂಪತಿಗಳು ಕರ್ವಾ ಚೌತ್ ಆಚರಿಸುತ್ತಿರುವುದು ಮತ್ತು ಜರಡಿ ಮೂಲಕ ಪರಸ್ಪರ ನೋಡುತ್ತಿರುವುದನ್ನು ತೋರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT