ಅರ್ಗತಲ: ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ತಿಪ್ರಾ ಮೋಥಾ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಇತರ ಇಬ್ಬರು ಸಿಬ್ಬಂದಿ ಸೇರಿದಂತೆ 12 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಡಕಟ್ಟು ಪ್ರಾಬಲ್ಯವಿರುವ ರಾಜ್ಯದ ಜಂಪೂಯಿಜಾಲಾ ಪ್ರದೇಶದಲ್ಲಿ ಘರ್ಷಣೆ ನಡೆದಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ನಂತರ ಸೋಮವಾರ ಬಿಜೆಪಿ ಕಾರ್ಯಕರ್ತರು ಈ ಪ್ರದೇಶದಲ್ಲಿ ಬೃಹತ್ ವಿಜಯೋತ್ಸವದ ರ‍್ಯಾಲಿ ನಡೆಸಿದ್ದರು.
ಬಿಜೆಪಿ ರ‍್ಯಾಲಿಗೆ ತಿಪ್ರಾ ಮೋಥಾ ಕಾರ್ಯಕರ್ತರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಎರಡು ಪಕ್ಷಗಳ ನಡುವೆ ಘರ್ಷಣೆ ಉಂಟಾಗಿದೆ ಎಂದು ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಜ್ಯೋತಿಷ್ಮನ್ ದಾಸ್ ಚೌಧರಿ ತಿಳಿಸಿದ್ದಾರೆ.
ಘರ್ಷಣೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಸೇರಿದಂತೆ 12 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಘರ್ಷಣೆಯನ್ನು ತಡೆಯಲು ಪ್ರಯತ್ನಿಸಿದ್ದ ವೇಳೆ ಕಲ್ಲು ತೂರಾಟ ನಡೆದಿದ್ದು, ತರ್ಕಜಾಲ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ರಥಿನ್ ದೆಬ್ಬರ್ಮಾ ಮತ್ತು ಇತರ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.
ಘರ್ಷಣೆಯ ನಂತರ ರ‍್ಯಾಲಿಯ ಸ್ಥಳವನ್ನು ತರ್ಕಜಾಲಕ್ಕೆ ಸ್ಥಳಾಂತರಿಸಲಾಗಿದ್ದು, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀಬ್ ಭಟ್ಟಾಚಾರ್ಜಿ, ‘ಶಾಂತಿ ಕದಡುವ ಪ್ರತಿಪಕ್ಷಗಳ ಪ್ರಯತ್ನಗಳನ್ನು ತಡೆಯಲು ಕೇಸರಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದಿದ್ದಾರೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.