ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಕೋವಿಡ್‌ ಲಸಿಕೆಗೆ ಒಪ್ಪಿಗೆ

ಭಾರತದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಒಂದೇ ಡೋಸ್‌ ಲಸಿಕೆ ಶೀಘ್ರದಲ್ಲಿ ಲಭ್ಯ
Last Updated 7 ಆಗಸ್ಟ್ 2021, 18:33 IST
ಅಕ್ಷರ ಗಾತ್ರ

ನವದೆಹಲಿ: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಒಂದೇ ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಶನಿವಾರ ತಿಳಿಸಿದ್ದಾರೆ. ಇದುಕೊರೊನಾ ಸೋಂಕಿನ ವಿರುದ್ಧ ದೇಶದ ಸಾಮೂಹಿಕ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಅಮೆರಿಕ ಮೂಲದ ಈ ಔಷಧ ಕಂಪನಿಯು, ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಿಶುಕ್ರವಾರ ಅರ್ಜಿ ಸಲ್ಲಿಸಿತ್ತು. ಅದೇ ದಿನ ಭಾರತದ ಔಷಧ ನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗಕ್ಕೆ ಅಂತ್ಯಹಾಡುವ ಉದ್ದೇಶದಿಂದ ಕೋವಿಡ್ ಲಸಿಕೆಗಳು ವೇಗವಾಗಿ ಜನರಿಗೆ ಲಭ್ಯವಾಗುವಂತೆ ಮಾಡುವಲ್ಲಿ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಪ್ರಮುಖ ಹೆಜ್ಜೆ ಎಂದು ಕಂಪನಿ ಪ್ರತಿಕ್ರಿಯಿಸಿದೆ.

‘18 ವರ್ಷ ಹಾಗೂ ಅದಕ್ಕೆ ಮೇಲ್ಪಟ್ಟ ವಯೋಮಾನದವರಿಗೆ ಒಂದೇ ಡೋಸ್ ಲಸಿಕೆ ನೀಡಲಾಗುತ್ತದೆ. ಇದರ ತುರ್ತು ಬಳಕೆಗೆ ಭಾರತದ ಅನುಮೋದನೆ ನೀಡಿದ್ದು ಸಂತೋಷಕರ’ ಎಂದು ಜಾನ್ಸನ್ ಅ್ಯಂಡ್ ಜಾನ್ಸನ್ ತಿಳಿಸಿದೆ.

‘ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಪರಿಣಾಮವನ್ನು ಆಧರಿಸಿ ಔಷಧದ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಅಧ್ಯಯನ ಮಾಡಿದ ಎಲ್ಲಾ ಪ್ರದೇಶಗಳಲ್ಲೂ, ಲಸಿಕೆಯು ಶೇ 85ರಷ್ಟು ಪರಿಣಾಮಕಾರಿಯಾಗಿದೆ ಹಾಗೂ ಕೋವಿಡ್–19 ಸಂಬಂಧಿತ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯುವಲ್ಲಿ ಹಾಗೂ ಸಂಭಾವ್ಯ ಸಾವಿನಿಂದ ರಕ್ಷಣೆ ನೀಡುವಲ್ಲಿ ಪರಿಣಾಮಕಾರಿಯಾಗಿರುವುದು ಸಾಬೀತಾಗಿದೆ. ಲಸಿಕೆ ತೆಗೆದುಕೊಂಡ 28 ದಿನಗಳ ಬಳಿಕ ಅದರ ಪರಿಣಾಮ ಶುರುವಾಗುತ್ತದೆ’ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ವಯಸ್ಸಿನ ಆಧಾರದ ಮೇಲೆ ಎರಡು ಗುಂಪುಗಳನ್ನು ಮಾಡಿ, ಸುಮಾರು 600 ಜನರ ಮೇಲೆ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಕಂಪನಿ ಅನುಮೋದನೆ ಕೋರಿತ್ತು. ಆದರೆ ಜುಲೈ 29ರಂದು ತನ್ನ ಅರ್ಜಿ ವಾಪಸ್ ಪಡೆದಿತ್ತು.

‘ಆದರೆ, ಕೇಂದ್ರ ಸರ್ಕಾರದ ಹೊಸಮಾರ್ಗಸೂಚಿ ಪ್ರಕಾರ ಅರ್ಜಿಯನ್ನು ವಾಪಸ್ ಪಡೆಯಿತು. ಬೇರೊಂದು ದೇಶದ ಔಷಧ ನಿಯಂತ್ರಕರಿಂದ ಲಸಿಕೆಗೆ ಪ್ರಮಾಣಪತ್ರ ಸಿಕ್ಕಿದ್ದರೆ, ಮತ್ತೆ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಲು ವಿನಾಯಿತಿ ನೀಡಲಾಗುತ್ತದೆ ಎಂದು ಸರ್ಕಾರ ತನ್ನ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿತ್ತು’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ, ಬ್ರಿಟನ್, ಯುರೋಪ್ ಮತ್ತು ಜಪಾನ್‌ನ ಔಷಧ ನಿಯಂತ್ರಕರಿಂದ ನಿರ್ಬಂಧಿತ ಬಳಕೆಗಾಗಿ ಅನುಮೋದಿಸಲಾಗಿರುವ ಲಸಿಕೆಗಳು ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಪಟ್ಟಿಯಲ್ಲಿ ಇರುವ ಲಸಿಕೆಗಳು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಬೇಕಾಗಿಲ್ಲ ಎಂದು ಸರ್ಕಾರ ತಿಳಿಸಿತ್ತು.

ಐದು ಲಸಿಕೆಗಳಿಗೆ ಅನುಮತಿ

ದೇಶದಲ್ಲಿ ಈವರೆಗೆ ಐದು ಲಸಿಕೆಗಳು ತುರ್ತು ಬಳಕೆಗೆ ಅನುಮೋದನೆ (ಇಯುಎ) ಪಡೆದಿವೆ. ಸೀರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್, ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್–ವಿ, ಮೊಡೆರ್ನಾ ಮತ್ತು ಈಗ ಜಾನ್ಸನ್ ಆ್ಯಂಡ್ ಜಾನ್ಸನ್ (ಜೆ&ಜೆ) ಕಂಪನಿಯ ಲಸಿಕೆಗಳು ಈ ಪಟ್ಟಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT