ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI) ಕುಸಿದು ಬಿದ್ದ ಶ್ರೀನಗರ ಮೂಲದ ಪ್ರಯಾಣಿಕರೊಬ್ಬರಿಗೆ ಹೃದಯ ರಕ್ತನಾಳದ ಪುನರುಜ್ಜೀವನ (ಸಿಪಿಆರ್) ಕ್ರಿಯೆ ನಡೆಸುವ ಮೂಲಕ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಯೋಧರು ಜೀವ ಉಳಿಸಿದ್ದಾರೆ.
‘ಈ ಘಟನೆ ಆ. 20ರಂದು ಬೆಳಿಗ್ಗೆ 11ಕ್ಕೆ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ನಡೆದಿದೆ. ಇಂಡಿಗೊ ವಿಮಾನ ಮೂಲಕ ಪ್ರಯಾಣಿಕರೊಬ್ಬರು ಶ್ರೀನಗರ ತೆರಳಲು ಸಜ್ಜಾಗಿದ್ದರು. ಟ್ರಾಲಿಗಳಿರುವಲ್ಲಿ ಕುಸಿದು ಬಿದ್ದರು. ಹೃದಯ ಬಡಿತ ನಿಲ್ಲಿಸಿದ ತುರ್ತು ಸಂದರ್ಭದಲ್ಲಿ ಸಿಪಿಆರ್ ಮೂಲಕ ವ್ಯಕ್ತಿಯ ಜೀವ ಉಳಿಸಬಹುದು. ಅದನ್ನು ನಮ್ಮ ಯೋಧರೊಬ್ಬರು ಮಾಡಿದ್ದಾರೆ’ ಎಂದು ಸಿಐಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.
‘ವ್ಯಕ್ತಿಯು ಕುಸಿದು ಬೀಳುವುದನ್ನು ಗಮನಿಸಿದ ಸಿಐಎಸ್‌ಎಫ್‌ನ ತ್ವರಿತ ಪ್ರತಿಕ್ರಿಯೆ ತಂಡದ ಇಬ್ಬರು ಯೋಧರು ತಕ್ಷಣ ಸಿಪಿಆರ್ ನೀಡಲು ಆರಂಭಿಸಿದರು. ನಂತರ ಕುಸಿದ ವ್ಯಕ್ತಿಯನ್ನು ಹತ್ತಿರದ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ತಂಡದ ತ್ವರಿತ ಪ್ರತಿಕ್ರಿಯೆಯಿಂದಾಗಿ ಅಮೂಲ್ಯ ಜೀವ ಉಳಿದಂತಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ಕೃತ್ಯಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ.