ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪೊರ್‌ಜಾಯ್ ಚಂಡಮಾರುತ ಮತ್ತಷ್ಟು ತೀವ್ರತೆ: ಸೌರಾಷ್ಟ್ರ –ಕಛ್‌ನಲ್ಲಿ ಭಾರಿ ಮಳೆ

ತಾತ್ಕಾಲಿಕ ಪರಿಹಾರ ಕೇಂದ್ರಕ್ಕೆ 50 ಸಾವಿರ ಜನರ ಸ್ಥಳಾಂತರ
Published 14 ಜೂನ್ 2023, 15:30 IST
Last Updated 14 ಜೂನ್ 2023, 15:30 IST
ಅಕ್ಷರ ಗಾತ್ರ

ಅಹಮದಾಬಾದ್: ಬಿಪೊರ್‌ಜಾಯ್ ಚಂಡಮಾರುತ ಮತ್ತಷ್ಟು ತೀವ್ರತೆ ಪಡೆದಿದ್ದು, ಗುರುವಾರ ಬೆಳಿಗ್ಗೆ ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಸೌರಾಷ್ಟ್ರ–ಕಛ್‌ ಪ್ರದೇಶದಲ್ಲಿ ಜೋರಾದ ಗಾಳಿ ಬೀಸುತ್ತಿದ್ದು, ಭಾರಿ ಮಳೆಯಾಗಿದೆ. ಕಛ್‌ ಜಿಲ್ಲೆಯ ಜಖೌ ಬಂದರ ಬಳಿ ಬಿಪೊರ್‌ಜಾಯ್ ಚಂಡಮಾರುತ ನೆಲಕ್ಕೆ ಅಪ್ಪಳಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರಾವಳಿಯ ಭಾಗದಲ್ಲಿನ 50 ಸಾವಿರ ಜನರನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

‘ತೀವ್ರ ಸ್ವರೂಪದ ಚಂಡಮಾರುತ’ವಾಗಿ ಪರಿವರ್ತನೆಗೊಂಡಿರುವ ಬಿಪೊರ್‌ಜಾಯ್, ಗಂಟೆಗೆ 150 ಕಿ.ಮೀ. ವೇಗದಲ್ಲಿ ಮುನ್ನುಗ್ಗುತ್ತಿದೆ’ ಎಂದು ಐಎಂಡಿ ಹೇಳಿದೆ.

‘ಅರಬ್ಬಿ ಸಮುದ್ರದಲ್ಲಿ ಅಬ್ಬರವನ್ನುಂಟು ಮಾಡಿರುವ ಬಿಪೊರ್‌ಜಾಯ್ ಚಂಡಮಾರುತ, ಬುಧವಾರ ಗುಜರಾತ್‌ನ ಕಛ್‌ ಪ್ರದೇಶ, ಪಾಕಿಸ್ತಾನದ ದಕ್ಷಿಣದತ್ತ ತಿರುಗುವ ಮುನ್ಸೂಚನೆ ನೀಡಿತ್ತು. ಈ ಹಂತದಲ್ಲಿ ಮಾರುತಗಳು ಸ್ವಲ್ಪ ದುರ್ಬಲಗೊಂಡಂತೆ ಕಂಡುಬಂದಿದ್ದರೂ, ಬಿರುಗಾಳಿ, ಭಾರಿ ಮಳೆ ತರುವ ಅಪಾಯ ಇದ್ದೇ ಇದೆ’ ಎಂದು ಇಲಾಖೆ ಹೇಳಿದೆ.

ನೆರವಿಗೆ ಭದ್ರತಾಪಡೆಗಳು ಸಿದ್ಧ: ರಾಜನಾಥ್‌ ಸಿಂಗ್‌

ನವದೆಹಲಿ (ಪಿಟಿಐ): ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮೂರು ಭದ್ರತಾ ಪಡೆಗಳ ಮುಖ್ಯಸ್ಥರೊಂದಿಗೆ ಬುಧವಾರ ಮಾತನಾಡಿ ಬಿಪೊರ್‌ಜಾಯ್‌ ಚಂಡಮಾರುತದಿಂದಾಗಿ ಕಂಡುಬರುವ ಪರಿಸ್ಥಿತಿ ಎದುರಿಸಲು ಮಾಡಿಕೊಂಡಿರುವ ಸಿದ್ಧತೆ ಕುರಿತು ಚರ್ಚಿಸಿದ್ದಾರೆ.

‘ಚಂಡಮಾರುತದಿಂದಾಗಿ ಉದ್ಭವಿಸುವ ಯಾವುದೇ ಪರಿಸ್ಥಿತಿ ಎದುರಿಸುವ ಸಲುವಾಗಿ  ಅಧಿಕಾರಿಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಮೂರು ಸೇನಾಪಡೆಗಳು ಸನ್ನದ್ಧವಾಗಿವೆ’ ಎಂದು ಅವರು ಸಭೆ ಬಳಿಕ ಟ್ವೀಟ್‌ ಮಾಡಿದ್ದಾರೆ.

ಭುಜ್‌ಗೆ ಮಾಂಡವಿಯಾ ಭೇಟಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಅವರು ಭುಜ್‌ನಲ್ಲಿರುವ ವಾಯುನೆಲೆಗೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು. ನಗರದಲ್ಲಿನ ಕೆ.ಕೆ.ಪಟೇಲ್ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಸನ್ನದ್ಧತೆ ಕುರಿತು ಮಾಹಿತಿ ಪಡೆದರು.

‘ವಾಯುಪಡೆಯ ‘ಗರುಡ ತುರ್ತು ಸ್ಪಂದನಾ ತಂಡ’ವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಚಂಡಮಾರುತದಿಂದ ಸ್ವತ್ತುಗಳು ಹಾಗೂ ಜನರನ್ನು ರಕ್ಷಿಸಲು ನಮ್ಮ ಯೋಧರು ಸಂಪೂರ್ಣ ಸಿದ್ಧರಾಗಿದ್ದಾರೆ’ ಎಂದು ಮಾಂಡವಿಯಾ ಹೇಳಿದ್ದಾರೆ.

90 ಮೀ. ಗೋಪುರ ನೆಲಸಮಗೊಳಿಸಿದ ಆಕಾಶವಾಣಿ ನವದೆಹಲಿ (ಪಿಟಿಐ): ಬಿಪೊರ್‌ಜಾಯ್‌ ಚಂಡಮಾರುತದಿಂದಾಗಿ ಆಗಬಹುದಾದ ಅವಘಡವನ್ನು ತಪ್ಪಿಸುವ ಉದ್ದೇಶದಿಂದ ಗುಜರಾತ್‌ನ ದ್ವಾರಕಾದಲ್ಲಿರುವ 90 ಮೀಟರ್‌ ಎತ್ತರದ ಪ್ರಸರಣ ಗೋಪುರವನ್ನು ನೆಲಸಮಗೊಳಿಸಿದ್ದಾಗಿ ಆಕಾಶವಾಣಿ ಬುಧವಾರ ಹೇಳಿದೆ.

‘ಚಂಡಮಾರುತ ಗುರುವಾರ ಅಪ್ಪಳಿಸುವ ನಿರೀಕ್ಷೆ ಇದೆ. ಆಸ್ತಿ ಹಾಗೂ ಜೀವ ಹಾನಿಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಈ ಗೋಪುರವನ್ನು ನೆಲಸಮಗೊಳಿಸುವಂತೆ ಸೂರತ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯು ಪ್ರಸಾರ ಭಾರತಿಗೆ ಕಳೆದ ಜನವರಿಯಲ್ಲಿಯೇ ಶಿಫಾರಸು ಮಾಡಿತ್ತು ಎಂದು ಮೂಲಗಳು ಹೇಳಿವೆ.

* 9 ತಾಲ್ಲೂಕುಗಳಲ್ಲಿ 5 ಸೆಂ.ಮೀ.ಗಿಂತ ಹೆಚ್ಚು ಮಳೆ

* ದ್ವಾರಕಾ ಜಿಲ್ಲೆ ಖಂಭಲಿಯಾ ತಾಲ್ಲೂಕಿನಲ್ಲಿ ಗರಿಷ್ಠ 12.1 ಸೆಂ.ಮೀ ಮಳೆ

* ಗುಜರಾತ್‌ನ ಉತ್ತರ ಭಾಗದ ಜಿಲ್ಲೆಗಳಲ್ಲಿ ಗುರುವಾರ ಭಾರಿ ಮಳೆ ಸಾಧ್ಯತೆ

* ಪಶ್ಚಿಮ ರೈಲ್ವೆಯು 69 ರೈಲುಗಳ ಸಂಚಾರವನ್ನು ರದ್ದು ಮಾಡಿದೆ

* ಗೋವಾದಲ್ಲಿ ಜೂನ್ 19ರಿಂದ 22ರ ವರೆಗೆ ನಡೆಯಲಿರುವ ಜಿ–20 ಶೃಂಗಸಭೆ ಮೇಲೆ ಬಿಪೊರ್‌ಜಾಯ್‌ ಚಂಡಮಾರುತ ಪರಿಣಾಮ ಬೀರದು– ಅಧಿಕಾರಿಗಳ ವಿಶ್ವಾಸ

* ಕಛ್‌ ಜಿಲ್ಲೆಯಲ್ಲಿ ಬುಧವಾರ ಸಂಜೆ 3.5 ತೀವ್ರತೆಯ ಭೂಕಂಪನ ದಾಖಲಾಗಿದೆ. ಯಾವುದೇ ಜೀವ ಹಾಗೂ ಸ್ವತ್ತುಗಳಿಗೆ ಹಾನಿಯಾದ ವರದಿಯಾಗಿಲ್ಲ

* ಎನ್‌ಡಿಆರ್‌ಎಫ್‌ ಸಿಬ್ಬಂದಿ ಮನವೊಲಿಸಿದ್ದರಿಂದ ಕಛ್‌ ಜಿಲ್ಲೆಯ ಸಲಾಯಾ ಗ್ರಾಮದ ಜನರು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ತೆರಳಲು ಕೊನೆಗೂ ಒಪ್ಪಿದರು. 

ಕಛ್‌ ಜಿಲ್ಲೆ ಜಖಾವು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ಜನರು ಆಶ್ರಯ ಪಡೆದಿದ್ದಾರೆ –ಎಎಫ್‌ಪಿ ಚಿತ್ರ
ಕಛ್‌ ಜಿಲ್ಲೆ ಜಖಾವು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ಜನರು ಆಶ್ರಯ ಪಡೆದಿದ್ದಾರೆ –ಎಎಫ್‌ಪಿ ಚಿತ್ರ
12 ಪರಿಹಾರ ಕಾರ್ಯದಲ್ಲಿ ನಿರತ ಎಸ್‌ಡಿಆರ್‌ಎಫ್‌ ತಂಡಗಳು 15 ರಕ್ಷಣಾ ಕಾರ್ಯದಲ್ಲಿ ನಿರತ ಎನ್‌ಡಿಆರ್‌ಎಫ್‌ ತಂಡಗಳು 115 ನಿಯೋಜನೆಗೊಂಡಿರುವ ಲೋಕೋಪಯೋಗಿ ಇಲಾಖೆ ತಂಡಗಳು 397 ಕರಾವಳಿ ಜಿಲ್ಲೆಗಳಲ್ಲಿ ನಿಯೋಜನೆಯಾಗಿರುವ ವಿದ್ಯುತ್‌ ಇಲಾಖೆ ತಂಡಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT