ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್‌ಟ್ಯಾಗ್‌: ಒಂದೇ ದಿನದಲ್ಲಿ ₹193 ಕೋಟಿ ಟೋಲ್‌ ಸಂಗ್ರಹ

ಇದೊಂದು ಐತಿಹಾಸಿಕ ಮೈಲಿಗಲ್ಲು: ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ
Published 2 ಮೇ 2023, 19:09 IST
Last Updated 2 ಮೇ 2023, 19:09 IST
ಅಕ್ಷರ ಗಾತ್ರ

ನವದೆಹಲಿ: ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹಕ್ಕೆ ಫಾಸ್‌ಟ್ಯಾಗ್‌ ವ್ಯವಸ್ಥೆ ಅಳವಡಿಸಿದ ನಂತರ ಟೋಲ್‌ ಸಂಗ್ರಹವು ದಾಖಲೆಯ ಏರಿಕೆ ಕಂಡಿದೆ. ಈ ವರ್ಷದ ಏಪ್ರಿಲ್‌ 29ರಂದು ದೇಶದಾದ್ಯಂತ ಒಂದೇ ದಿನ ಫಾಸ್‌ಟ್ಯಾಗ್‌ ಮೂಲಕ 1.16 ಕೋಟಿ ವಹಿವಾಟು ನಡೆದು, ಒಟ್ಟು ₹193.15 ಕೋಟಿ ಸಂಗ್ರಹವಾಗಿದ್ದು, ಇದು ದಾಖಲೆಯಾಗಿದೆ.

ಟೋಲ್ ಸಂಗ್ರಹಕ್ಕಾಗಿ ಫಾಸ್‌ಟ್ಯಾಗ್‌ ವ್ಯವಸ್ಥೆ ಅನುಷ್ಠಾನಕ್ಕೆ ಬಂದ ಮೇಲೆ ವಾಹನ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

‘ಸರ್ಕಾರವು ಫಾಸ್‌ಟ್ಯಾಗ್‌ ವ್ಯವಸ್ಥೆಯನ್ನು 2021ರ ಫೆಬ್ರುವರಿಯಿಂದ ಕಡ್ಡಾಯಗೊಳಿಸಿದೆ. ಇದರಿಂದ ಟೋಲ್ ಪ್ಲಾಜಾಗಳ ಸಂಖ್ಯೆ 770 ರಿಂದ 1,228ಕ್ಕೆ ಏರಿಕೆಯಾಗಿವೆ. ಇದರಲ್ಲಿ 339 ರಾಜ್ಯಗಳ ಟೋಲ್ ಪ್ಲಾಜಾಗಳೂ ಸೇರಿವೆ. 6.9 ಕೋಟಿ ಫಾಸ್‌ಟ್ಯಾಗ್‌ಗಳನ್ನು ಬಳಕೆದಾರರಿಗೆ ವಿತರಿಸಿದ್ದು, ಇವು ಶೇ 97ರಷ್ಟು ಬಳಕೆಯಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿಯ ಪ್ಲಾಜಾಗಳಲ್ಲಿ ಕಾಯುವ ಸಮಯ ಕಡಿಮೆ ಮಾಡುವ ಮೂಲಕ ವಾಹನ ಬಳಕೆದಾರರಿಗೆ ಅನುಕೂಲ ಕಲ್ಪಿಸಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

 ಪರಿಣಾಮಕಾರಿ ಟೋಲ್ ಸಂಗ್ರಹದ ಜೊತೆಗೆ, ಫಾಸ್‌ಟ್ಯಾಗ್ ದೇಶದಾದ್ಯಂತ 50ಕ್ಕೂ ಹೆಚ್ಚು ನಗರಗಳಲ್ಲಿ 140ಕ್ಕೂ ಹೆಚ್ಚು ಪಾರ್ಕಿಂಗ್ ಸ್ಥಳಗಳಲ್ಲಿ ತಡೆರಹಿತ ಮತ್ತು ಸುರಕ್ಷಿತ ಪಾರ್ಕಿಂಗ್ ಶುಲ್ಕ ಪಾವತಿ ಸೌಲಭ್ಯ ಒದಗಿಸಿದೆ. ಜತೆಗೆ, ಗ್ಲೋಬಲ್‌ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್‌ಎಸ್‌ಎಸ್) ಬಳಸಿಕೊಂಡು ತಡೆ ರಹಿತ ಸಂಚಾರ ವ್ಯವಸ್ಥೆ ಅನುಷ್ಠಾನಕ್ಕೆ ಬೇಕಿರುವ ಅವಶ್ಯಕತೆಗಳನ್ನು ಅಂತಿಮಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದೂ ಸಚಿವಾಲಯ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT