ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಬಯಲಿಗೆಳೆದ ದಲಿತ ಐಎಎಸ್‌ ಅಧಿಕಾರಿಗೆ ಕಿರುಕುಳ: ಕಾಂಗ್ರೆಸ್‌ ಆರೋಪ

Published 11 ಸೆಪ್ಟೆಂಬರ್ 2023, 16:24 IST
Last Updated 11 ಸೆಪ್ಟೆಂಬರ್ 2023, 16:24 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಹುಕೋಟಿ ಜಲ ಜೀವನ್ ಮಿಷನ್ ಹಗರಣವನ್ನು ಬಯಲಿಗೆಳೆದ ದಲಿತ ಐಎಎಸ್ ಅಧಿಕಾರಿ ಆಶೋಕ್‌ ಪರ್ಮಾರ್‌ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಅಧಿಕಾರಿ ನೀಡಿದ ದೂರಿನ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ಜಮ್ಮು ಮತ್ತು ಕಾಶ್ಮೀರದ ಜಲ ಜೀವನ್ ಮಿಷನ್‌ನಲ್ಲಿ ₹13,000 ಕೋಟಿ ಭ್ರಷ್ಟಾಚಾರ ನಡೆದಿರುವುದನ್ನು ಪರ್ಮಾರ್‌ ಬಯಲಿಗೆಳೆದಿದ್ದರು. ಸದ್ಯ ಅವರನ್ನು ಗುರಿಯಾಗಿಸಲಾಗಿದ್ದು, ಕಿರುಕುಳ ನೀಡಲಾಗುತ್ತಿದೆ. ಇದು ಏಕೆ ಹೀಗೆ? ಹಣ ಲಪಟಾಯಿಸಿದ, ಸರ್ಕಾರದ ಖಜಾನೆ ಲೂಟಿ ಮಾಡಿದ ಇತರ ಅಧಿಕಾರಿಗಳಿಗೆ ಏಕೆ ಬಡ್ತಿ ನೀಡಲಾಗಿದೆ? ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಉತ್ತರಿಸುವುದೇ? ಎಂದು ಪ್ರಶ್ನಿಸಿದರು. 

‘ಜಲಜೀವನ ಮಿಷನ್‌ ಅಕ್ರಮದ ಬಗ್ಗೆ ಗೃಹ ಸಚಿವಾಲಯಕ್ಕೆ ದೂರು ನೀಡಲಾಗಿದೆ. ಸಿಬಿಐ ತನಿಖೆಗೆ ಮನವಿ ಮಾಡಲಾಗಿದೆ. ಆದರೂ, ಜಮ್ಮು ಮತ್ತು ಕಾಶ್ಮೀರದ ಆಡಳಿತ, ನರೇಂದ್ರ ಮೋದಿ ಸರ್ಕಾರ ತನಿಖೆಗೆ ಏಕೆ ಆದೇಶಿಸಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.   

‘ತಾವು ಅನುಭವಿಸುತ್ತಿರುವ ಕಿರುಕುಳ, ಬೆದರಿಕೆ ಮತ್ತು ದೌರ್ಜನ್ಯಗಳ ಬಗ್ಗೆ ದಲಿತ ಐಎಎಸ್ ಅಧಿಕಾರಿ ಪರ್ಮಾರ್‌ ದೂರು ನೀಡಿದರೂ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಶೋಕಾಸ್ ನೋಟಿಸ್ ನೀಡಿಲ್ಲ. ಸಂಬಂಧಿಸಿದವರ ವಿರುದ್ಧ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಆಗದೇ’ ಎಂದು ಅವರು ಸವಾಲು ಹಾಕಿದರು. 

‘ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ, ವಿಚಕ್ಷಣ ದಳದ ಅಧಿಕಾರಿಗಳನ್ನು ಪ್ರತಿಪಕ್ಷದ ನಾಯಕರ ಮನೆಗಳಿಗೆ ಕಳುಹಿಸುವ ಮೋದಿ ಸರ್ಕಾರ, ಐಎಎಸ್‌ ಅಧಿಕಾರಿ ಪರ್ಮಾರ್‌ ಬಯಲಿಗೆಳೆದಿರುವ ಹಗರಣದ ಬಗ್ಗೆ ಆಂತರಿಕ ತನಿಖೆ ನಡೆಸಲೂ ಚಿಂತಿಸುತ್ತಿಲ್ಲ’ ಎಂದು ಖೇರಾ ಆರೋಪಿಸಿದರು.

‘ಭಾರತದ ಜನರಿಗೆ ಈಗ ಎಲ್ಲವೂ ಗೊತ್ತಾಗಿದೆ. 2024 ರಲ್ಲಿ ಬಿಜೆಪಿಗೆ ಸೂಕ್ತ ಉತ್ತರ ನೀಡಲಿದ್ದಾರೆ‘ ಎಂದು ಅವರು ಹೇಳಿದರು. 

ಜಮ್ಮು ಮತ್ತು ಕಾಶ್ಮೀರ ಆಡಳಿತವು ತಮಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಐಎಎಸ್ ಅಧಿಕಾರಿ ಪರ್ಮಾರ್ ಅವರು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT