ಹೈದರಾಬಾದ್: ಪರಿಶಿಷ್ಟ ಜಾತಿಯ ಯುವಕ ಹಿಂದುಳಿದ ವರ್ಗದ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ಹುಡುಗಿ ಕಡೆಯವರು, ಯುವಕನ ತಾಯಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ನಡೆದಿದೆ.
ಈ ಮದುವೆಯನ್ನು ಹುಡುಗಿ ಕುಟುಂಬದವರು ಒಪ್ಪಿರಲಿಲ್ಲ. ವರದಿಗಳ ಪ್ರಕಾರ, ಕರ್ನೂಲ್ ಜಿಲ್ಲೆಯ ಪೆದ್ದ ಕಡುಬೂರು ಮಂಡಲದ ಕಾಳಕುಂಟಾ ಗ್ರಾಮದ ನಿವಾಸಿ ಕೆ.ಗೋವಿಂದಮ್ಮ ಅವರ ಮಗ ಅದೇ ಗ್ರಾಮದ ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದ. ಹುಡುಗಿಯ ಕುಟುಂಬದವರು ತೊಂದರೆ ಕೊಡಬಹುದು ಎಂದು ಮಗ–ಸೊಸೆ ಜತೆಗೆ ಗೋವಿಂದಮ್ಮ ಗ್ರಾಮ ತೊರೆದಿದ್ದರು. ಆರು ತಿಂಗಳ ನಂತರ ಗೋವಿಂದಮ್ಮ ಗ್ರಾಮಕ್ಕೆ ಮರಳಿದಾಗ, ಹುಡುಗಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಗುರುವಾರ ತಡರಾತ್ರಿ ಗೋವಿಂದಮ್ಮ ಅವರ ಮನೆಗೆ ನುಗ್ಗಿ, ಆಕೆಯನ್ನು ರಸ್ತೆಗೆ ಎಳೆದೊಯ್ದಿದ್ದಾರೆ. ಬಳಿಕ ಆಕೆಯನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಆಕೆಯನ್ನು ಮಾನಸಿಕ ಅಸ್ವಸ್ಥ ವ್ಯಕ್ತಿಯೊಂದಿಗೆ ಮದುವೆ ಮಾಡಿಸಲು ಪ್ರಯತ್ನಿಸಿದ್ದಾರೆ. ಗ್ರಾಮದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಗ್ರಾಮಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದಾರೆ.
ಶುಕ್ರವಾರ ನಸುಕಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.