ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Manipur Violence | ಹೋರಾಟದ ಹಿನ್ನೆಲೆಯ ಮಣಿಪುರದ ಮಹಿಳೆಯರು

Published 20 ಜುಲೈ 2023, 13:23 IST
Last Updated 20 ಜುಲೈ 2023, 13:23 IST
ಅಕ್ಷರ ಗಾತ್ರ

ನವದೆಹಲಿ: ಮಣಿಪುರದ ಹಿಂಸಾಚಾರ ಸಂದರ್ಭದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡಿದ್ದನ್ನು ಇಡೀ ರಾಷ್ಟ್ರವೇ ಖಂಡಿಸಿದೆ. ಆದರೆ ಅತ್ಯಂತ ಸೂಕ್ಷ್ಮ ವಿಷಯಗಳಲ್ಲಿ ಬೆತ್ತಲಾಗಿ ರಸ್ತೆಗಿಳಿದು ಹೋರಾಟ ನಡೆಸುವ ಮೂಲಕ ಮಣಿಪುರ ಮಹಿಳೆಯರು ಎಂಥದ್ದೇ ಹೋರಾಟಕ್ಕೂ ಸಿದ್ಧ ಎಂದು ಸಾಬೀತುಪಡಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಮಾದಕದ್ರವ್ಯದ ಕಡಿವಾಣಕ್ಕೆ ಆಗ್ರಹ, ಮಾನವ ಹಕ್ಕುಗಳ ಉಲ್ಲಂಘನೆ, ಭ್ರಷ್ಟಾಚಾರ, ಸಶಸ್ತ್ರ ಪಡೆಗಳ ಕಾಯ್ದೆ ಹಾಗೂ ಪೌರತ್ವ ವಿಧೇಯಕ ವಿಷಯದಲ್ಲಿ ಈಶಾನ್ಯ ರಾಜ್ಯವಾದ ಮಣಿಪುರದ ಮಹಿಳೆಯರು ಬೀದಿಗಿಳಿದು ಒಗ್ಗಟ್ಟು ಪ್ರದರ್ಶಿಸಿದ್ದರು.

ಇದನ್ನು ಓದಿ: ಮಣಿಪುರ | ಮಹಿಳೆಯರ ಬೆತ್ತಲೆ ಮೆರವಣಿಗೆ: ಬಾಲಿವುಡ್‌ ಮಂದಿಯ ವ್ಯಾಪಕ ಆಕ್ರೋಶ

ಭಾರತೀಯ ಸೇನೆ ವಿರುದ್ಧ 12 ಜನ ಮಹಿಳೆಯರು 2004ರ ಜುಲೈ 15ರಂದು ಬೆತ್ತಲೆ ಪ್ರತಿಭಟನೆ ನಡೆಸಿದ್ದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ದಶಕಗಳಿಂದ ರಾಜ್ಯವನ್ನು ಕಾಡುತ್ತಿದ್ದ ಭಯೋತ್ಪಾದಕ ಕೃತ್ಯ ನಿಯಂತ್ರಿಸಲು ನಿಯೋಜನೆಗೊಂಡಿದ್ದ ಸಶಸ್ತ್ರ ಮೀಸಲು ಪಡೆಯ ಯೋಧರು 32 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ 12 ಹಿರಿಯ ಮಹಿಳೆಯರು ವಿವಸ್ತ್ರವಾಗಿ ಇಂಫಾಲದ ಪ್ರಮುಖ ಬೀದಿಯಲ್ಲಿ ಬ್ಯಾನರ್ ಹಿಡಿದು ಧರಣಿ ನಡೆಸಿದ್ದರು. ಇದರ ಪರಿಣಾಮ ಅಸ್ಸಾಂ ರೈಫಲ್ಸ್‌ನ ಯೋಧರು ಐತಿಹಾಸಿಕ ಕಾಂಗ್ಲಾ ಕೋಟೆಯಿಂದ ನಿರ್ಗಮಿಸಬೇಕಾಯಿತು.

ಮಣಿಪುರದಲ್ಲಿ ನಡೆದ ಪ್ರತಿಯೊಂದು ಧರಣಿಯೂ ಮಹಿಳೆಯರ ನೇತೃತ್ವದಲ್ಲೇ ನಡೆಯುವುದು ಸಾಮಾನ್ಯ ಎಂಬಂತಾಗಿದೆ. ಅದು ಧರಣಿಯೇ ಇರಲಿ, ರಾಜಕೀಯ ಅಥವಾ ಸಾಮಾಜಿಕ ಸಮಸ್ಯೆಗಳೇ ಇರಲಿ. ಸದಾ ಮುಂದೆ ನಿಂತು ಹೋರಾಟದ ನಾಯಕತ್ವ ವಹಿಸುವ ಮೂಲಕ ರಾಜ್ಯದಲ್ಲೇ ಅತ್ಯಂತ ಪ್ರಭಾವಿ ಎಂದೆನಿಸಿಕೊಂಡಿದ್ದಾರೆ ಮಣಿಪುರದ ಮಹಿಳೆಯರು.

ಇದನ್ನು ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ: ಒಬ್ಬನ ಬಂಧನ– ಸಿಎಂ ಬಿರೇನ್ ಸಿಂಗ್

ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದು ಆರು ವರ್ಷಗಳ ಕಾಲ ಇಲ್ಲೇ ಇರುವ ಹಿಂದೂ, ಜೈನ್, ಕ್ರೈಸ್ತ, ಸಿಖ್, ಬೌದ್ಧ ಹಾಗೂ ಪಾರ್ಸಿ ಜನಾಂಗದವರಿಗೆ ಪೌರತ್ವ ನೀಡುವ ವಿಧೇಯಕದ ವಿರುದ್ಧವೂ ಮಹಿಳೆಯರು ಬೀದಿಗಿಳಿದಿದ್ದರು. ಈ ಕಾಯ್ದೆಯಿಂದ ಭವಿಷ್ಯದಲ್ಲಿ ತಮಗೆ ತೊಂದರೆ ಆಗಲಿದೆ ಎಂದು ಭಾವಿಸಿದ್ದ ಇಲ್ಲಿನ ಮಹಿಳೆಯರು ಮಣಿಪುರ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಇದು ಬಹುದೊಡ್ಡ ಅಪಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

2019ರ ಜ. 19ರಂದು ಇಂಫಾಲದಲ್ಲಿರುವ ಇಮಾ ಕೈಥೆಲ್‌ ಬಜಾರ್‌ನಲ್ಲಿ ವ್ಯಾಪಾರ ನಡೆಸುವ ಮಹಿಳೆಯರು ಈ ಪೌರತ್ವ ವಿಧೇಯಕವನ್ನು ವಿರೋಧಿಸಿ ಧರಣಿ ನಡೆಸಿದ್ದರು. ಸುಮಾರು 4 ಸಾವಿರ ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು. 

ರಾಜ್ಯದಿಂದ ಸೇನೆಯನ್ನು ಹಿಂಪಡೆಯುವಂತೆ ಮಣಿಪುರದ ನಾಗರಿಕ ಹಕ್ಕು ಹೋರಾಟಗಾರ್ತಿ ಇರೋಂ ಚಾನು ಶರ್ಮಿಳಾ ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಲೇ ಇದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT