ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಿದ್ದಕ್ಕಿಂತ ಕಡಿಮೆ ಹಣ ಕೊಟ್ಟಿರುವ ಸರ್ಕಾರ: ಭೂಸೇನೆಗೆ ಅನುದಾನ ಕೊರತೆ

ರಕ್ಷಣಾ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ವರದಿ
Last Updated 29 ಡಿಸೆಂಬರ್ 2019, 2:53 IST
ಅಕ್ಷರ ಗಾತ್ರ

ಭಾರತೀಯ ಭೂಸೇನೆಯು 2019–20ನೇ ಸಾಲಿನಲ್ಲಿ ಕೇಳಿದ್ದಕ್ಕಿಂತ ಕಡಿಮೆ ಅನುದಾನವನ್ನು ರಕ್ಷಣಾ ಸಚಿವಾಲಯ ನೀಡಿದೆ. ಭೂಸೇನೆಯ ಅಗತ್ಯಗಳು ಮತ್ತು ರಕ್ಷಣಾ ಸಚಿವಾಲಯದ ನೀತಿಗಳು ತಾಳೆಯಾಗುತ್ತಿಲ್ಲ.

ಸೇನೆಯ ಆಧುನೀಕರಣಕ್ಕೆ ಹಿಂದಿನ ಐದು ಹಣಕಾಸು ವರ್ಷಗಳಲ್ಲೂ ಅಗತ್ಯಕ್ಕಿಂತ ಕಡಿಮೆ ಮೊತ್ತವನ್ನು ನೀಡಲಾಗಿದೆ.ಇದರಿಂದ ಭೂಸೇನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ತೊಡಕಾಗುತ್ತಿದೆ. ನೌಕಾಪಡೆಯು ಕೇಳಿದ್ದಕ್ಕಿಂತ ₹ 53,035 ಕೋಟಿ ಮತ್ತು ವಾಯುಪಡೆ ಕೇಳಿದ್ದಕ್ಕಿಂತ ₹ 23,048 ಕೋಟಿಯಷ್ಟು ಕಡಿಮೆ ಮೊತ್ತವನ್ನು ರಕ್ಷಣಾ ಸಚಿವಾಲಯವು ಹಂಚಿಕೆ ಮಾಡಿದೆ.

ದೇಶದ ಭದ್ರತೆ ದೃಷ್ಟಿಯಿಂದ ಇದು ಅಪಾಯಕಾರಿ ಎಂದು ರಕ್ಷಣಾ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಕಳವಳ ವ್ಯಕ್ತಪಡಿಸಿದೆ. ಇದೇ ಡಿಸೆಂಬರ್‌ನಲ್ಲಿ ಲೋಕಸಭೆಗೆ ಸಲ್ಲಿಸಲಾಗಿರುವ ‘ಅನುದಾನಕ್ಕಾಗಿ ಬೇಡಿಕೆ ಕುರಿತ ಪರಿಶೀಲನಾ ವರದಿ’ಯಲ್ಲಿ ಈ ಮಾಹಿತಿ ಇದೆ.

ಕಾರ್ಯನಿರ್ವಹಣೆಗೆ ತೊಡಕು

ಭೂಸೇನೆಯ ದೈನಂದಿನ ಕಾರ್ಯಚಟುವಟಿಕೆ, ಸೈನಿಕರ ತರಬೇತಿ, ವಾಹನಗಳ ನಿರ್ವಹಣೆ, ಶಸ್ತ್ರಾಸ್ತ್ರಗಳ ನಿರ್ವಹಣೆ, ದೈನಂದಿನ ಅಡುಗೆ ವೆಚ್ಚ, ಸಾಗಣೆ ಮತ್ತು ಓಡಾಟ ಹಾಗೂ ಕಾರ್ಯಾಚರಣೆಗಳ ವೆಚ್ಚವನ್ನು ಭೂಸೇನೆಯ ರೆವಿನ್ಯೂ ಬಜೆಟ್‌ ಎನ್ನಲಾಗುತ್ತದೆ.

2019–20ನೇ ಸಾಲಿನಲ್ಲಿ ಸೇನೆಯು ಕೇಳಿದ್ದಕ್ಕಿಂತ ಶೇ 25ರಷ್ಟು ಕಡಿಮೆ ಅನುದಾನವನ್ನು ರಕ್ಷಣಾ ಸಚಿವಾಲಯ ಹಂಚಿಕೆ ಮಾಡಿದೆ. ಸೇನೆಯನ್ನು ಯುದ್ಧಸನ್ನದ್ಧವಾಗಿ ಇರಿಸಿಕೊಳ್ಳಲು ಇದರಿಂದ ತೊಡಕಾಗುತ್ತದೆ. ದೇಶದ ಭದ್ರತೆ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಪೂರಕ ಬಜೆಟ್‌ನಲ್ಲಿ ಅಗತ್ಯ ಹಣವನ್ನು ಸರ್ಕಾರವು ಮಂಜೂರು ಮಾಡಬೇಕು ಎಂದು ಸಮಿತಿಯು ಹೇಳಿದೆ.

ಶಸ್ತ್ರಾಸ್ತ್ರ ಖರೀದಿ, ನಿರ್ವಹಣೆಗೂ ಕೊರತೆ
ಶಸ್ತ್ರಾಸ್ತ್ರ ಮತ್ತು ವಾಹನಗಳ ನಿರ್ವಹಣೆ ಹಾಗೂ ಖರೀದಿಗೂ ಕಡಿಮೆ ಅನುದಾನವನ್ನು ರಕ್ಷಣಾ ಸಚಿವಾಲಯ ಹಂಚಿಕೆ ಮಾಡಿದೆ. ಬಂದೂಕುಗಳು, ಫಿರಂಗಿಗಳು, ಟ್ಯಾಂಕ್‌ಗಳ ನಿರ್ವಹಣೆಗೆ ಇದರಿಂದ ತೊಡಕಾಗುತ್ತಿದೆ. ಅಲ್ಲದೆ ಹೊಸದಾಗಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಖರೀದಿಸಲು ಅನುದಾನ ಸಾಲುತ್ತಿಲ್ಲ. ಹಾಗಾಗಿ ಭೂಸೇನೆಯ ಯುದ್ಧಸನ್ನದ್ಧತೆಗೆ ತೊಡಕಾಗುತ್ತದೆ. ಇದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಸಮಿತಿಯು ಕಳವಳ ವ್ಯಕ್ತಪಡಿಸಿದೆ.

ಮೂಲಸೌಕರ್ಯ ಅಭಿವೃದ್ಧಿಗೂ ಅಡ್ಡಿ
ರೋಹ್ತಾಂಗ್‌ ಪಾಸ್ ಸುರಂಗ ಮಾರ್ಗ, ಚೀನಾ ಸ್ಟಡಿ ಗ್ರೂಪ್‌ ರಸ್ತೆ (ಸಿಎಸ್‌ಜಿ) ಮತ್ತು ಈಶಾನ್ಯ ಭಾರತದ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೂ ಕಡಿಮೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

‘ಆಧುನೀಕರಣಕ್ಕೆ ಸರ್ಕಾರದ ನಿರುತ್ಸಾಹ’
‘ಸೇನೆಯ ಶಸ್ತ್ರಾಸ್ತ್ರ, ವಾಹನಗಳು ಮತ್ತು ಸೈನಿಕರು ಬಳಸುವ ಉಪಕರಣಗಳ ಅಧುನೀಕರಣದ ಬಗ್ಗೆ ಸರ್ಕಾರ ಮತ್ತು ರಕ್ಷಣಾ ಸಚಿವಾಲಯವು ಭಾರಿ ಉತ್ಸಾಹ ತೋರಿಸುತ್ತದೆ. ಆದರೆ, ಬಜೆಟ್‌ನ ಅನುದಾನ ಹಂಚಿಕೆಯಲ್ಲಿ ಈ ಉತ್ಸಾಹ ಇರುವುದಿಲ್ಲ. 2018–19ನೇ ಸಾಲಿನಲ್ಲಿ ಆಧುನೀಕರಣಕ್ಕೆ ಅಗತ್ಯವಿರುವ ಅಂದಾಜು ಮೊತ್ತದ ವಿವರ ಮತ್ತು ಪರಿಷ್ಕೃತ ಅಂದಾಜು ವಿವರವನ್ನು ಭೂಸೇನೆ ಸಲ್ಲಿಸಿದೆ. ಮೊದಲ ಅಂದಾಜಿನಲ್ಲಿ ಕಡಿಮೆ ಮೊತ್ತವಿದ್ದರೆ, ಪರಿಷ್ಕೃತ ಅಂದಾಜಿನಲ್ಲಿ ಮೊತ್ತವನ್ನು ಏರಿಕೆ ಮಾಡಲಾಗಿದೆ. ಆದರೆ, ಸರ್ಕಾರವು ಮೊದಲ ಅಂದಾಜಿನಲ್ಲಿ ಕೋರಿದ್ದ ಮೊತ್ತಕ್ಕಿಂತಲೂ ಕಡಿಮೆ ಮೊತ್ತವನ್ನು ಹಂಚಿಕೆ ಮಾಡಿದೆ. ಸೇನೆಯ ಆಧುನೀಕರಣಕ್ಕೆ ಸರ್ಕಾರ ಮತ್ತು ರಕ್ಷಣಾ ಸಚಿವಾಲಯವು ಆದ್ಯತೆ ನೀಡಲೇಬೇಕು. ಇದಕ್ಕಾಗಿ ರಕ್ಷಣಾ ಸಚಿವಾಲಯವು ತನ್ನ ಇತರ ಆದ್ಯತೆ ಬದಲಿಸಿಕೊಳ್ಳಬೇಕು’ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT