ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹45 ಸಾವಿರ ಕೋಟಿ ವೆಚ್ಚದ ರಕ್ಷಣಾ ಸಾಮಗ್ರಿ ಖರೀದಿಗೆ ಅನುಮತಿ: ರಕ್ಷಣಾ ಸಚಿವಾಲಯ

12 ಸುಖೋಯ್‌–30 ಎಂಕೆಐ ಯುದ್ಧ ವಿಮಾನಗಳು, ಧ್ರುವಾಸ್ತ್ರ ಕ್ಷಿಪಣಿ ಖರೀದಿಗೂ ಅಸ್ತು
Published 15 ಸೆಪ್ಟೆಂಬರ್ 2023, 13:54 IST
Last Updated 15 ಸೆಪ್ಟೆಂಬರ್ 2023, 13:54 IST
ಅಕ್ಷರ ಗಾತ್ರ

ನವದೆಹಲಿ: ಸುಮಾರು ₹45 ಸಾವಿರ ಕೋಟಿ ವೆಚ್ಚದಲ್ಲಿ 12 ಸುಖೋಯ್‌–30 ಎಂಕೆಐ ಯುದ್ಧ ವಿಮಾನಗಳು ಮತ್ತು ಆಕಾಶದಿಂದ ನೆಲದ ಮೇಲೆ ದಾಳಿ ನಡೆಸುವ ಕಡಿಮೆ ವ್ಯಾಪ್ತಿಯ ಧ್ರುವಾಸ್ತ್ರ ಕ್ಷಿಪಣಿ ಸೇರಿದಂತೆ ವಿವಿಧ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಸಾಮಗ್ರಿಗಳ ಖರೀದಿಗೆ ರಕ್ಷಣಾ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ನೇತೃತ್ವದ ರಕ್ಷಣಾ ಖರೀದಿ ಮಂಡಳಿಯು (ಡಿಎಸಿ) ಒಟ್ಟು ಒಂಬತ್ತು ಖರೀದಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾ ಭದ್ರತೆ, ಸಂಚಾರ, ದಾಳಿಯ ಸಾಮರ್ಥ್ಯ ಮತ್ತು ಯಂತ್ರಸಜ್ಜಿತ ಪಡೆಗಳ ಬಲ ಹೆಚ್ಚಿಸುವ ಸಲುವಾಗಿ ಲಘು ಶಸ್ತ್ರಸಜ್ಜಿತ ವಿವಿಧೋದ್ದೇಶ ವಾಹನಗಳು (ಎಲ್‌ಎಎಂವಿ) ಮತ್ತು ಸಮಗ್ರ ಕಣ್ಗಾವಲು ಹಾಗೂ ಗುರಿ ವ್ಯವಸ್ಥೆ (ಐಎಸ್‌ಎಟಿ –ಎಸ್‌) ಖರೀದಿಗೆ ಡಿಎಸಿ ಅನುಮೋದನೆ ನೀಡಿದೆ ಎಂದು ಸಚಿವಾಲಯ ತಿಳಿಸಿದೆ.

ಫಿರಂಗಿ ಬಂದೂಕುಗಳು ಮತ್ತು ರಾಡಾರ್‌ಗಳ ತ್ವರಿತ ಸಜ್ಜುಗೊಳಿಸುವಿಕೆ ಮತ್ತು ನಿಯೋಜನೆಗಾಗಿ ಭಾರಿ ವಾಹನಗಳು (ಹೈ ಮೊಬಿಲಿಟಿ ವೆಹಿಕಲ್–ಎಚ್‌ಎಂವಿ), ಬಂದೂಕು ಟೋಯಿಂಗ್‌ ವಾಹನಗಳ ಖರೀದಿ ಹಾಗೂ ಭಾರತೀಯ ನೌಕಾಪಡೆಗೆ ಅತ್ಯಾಧುನಿಕ ವ್ಯವಸ್ಥೆ ಇರುವ ಸರ್ವೇಕ್ಷಣಾ ಹಡಗುಗಳ ಖರೀದಿಗೂ ಡಿಎಸಿ ಅನುಮೋದನೆ ನೀಡಿದೆ ಎಂದು ಹೇಳಿದೆ. 

ಭಾರತೀಯ ವಾಯುಪಡೆಯ ಡಾರ್ನಿಯರ್‌ ಯುದ್ಧ ವಿಮಾನಗಳ  ಕಾರ್ಯಾಚರಣೆಯ ನಿಖರತೆ ಮತ್ತು ವಿಶ್ವಾಸಾರ್ಹತೆ ಖಾತ್ರಿಗೆ ಅವುಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.

ದೇಶೀಯವಾಗಿ ನಿರ್ಮಿಸಲಾದ ಅತ್ಯಾಧುನಿಕ ಎಎಲ್‌ಎಚ್‌ ಎಂಕೆ–4 ಹೆಲಿಕಾಪ್ಟರ್‌ಗಳಿಗೆ ಸ್ವದೇಶಿ ನಿಖರ ಮಾರ್ಗದರ್ಶಿ ಅಸ್ತ್ರವಾದ ಆಕಾಶದಿಂದ ನೆಲದ ಮೇಲೆ ದಾಳಿ ನಡೆಸುವ ಕಡಿಮೆ ವ್ಯಾಪ್ತಿಯ ಧ್ರುವಾಸ್ತ್ರ ಕ್ಷಿಪಣಿ ಖರೀದಿಸಲು ಮತ್ತು ಎಚ್‌ಎಎಲ್‌ನಿಂದ 12 ಎಸ್‌ಯು–30 ಎಂಕೆಐ ಯುದ್ಧ ವಿಮಾನಗಳ ಖರೀದಿಗೂ ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. 

‘ಈ ಎಲ್ಲ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಸಾಮಗ್ರಿಗಳನ್ನು ಭಾರತೀಯ ರಕ್ಷಣಾ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೇಶದಲ್ಲೇ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿ ಮತ್ತು ತಯಾರಿಸಿದ (ಐಡಿಎಂಎಂ) ಭಾರತೀಯ ಶಸ್ತ್ರಾಸ್ತ್ರ ತಯಾರಕರು ಮತ್ತು ಮಾರಾಟಗಾರರಿಂದ ಖರೀದಿಸಲಾಗುವುದು. ಇದು ‘ಆತ್ಮನಿರ್ಭರ ಭಾರತ’ದ ಗುರಿ ಸಾಧಿಸುವಲ್ಲಿಯೂ ನೆರವಾಗಲಿದೆ’ ಎಂದೂ ರಕ್ಷಣಾ ಸಚಿವಾಲಯ ಹೇಳಿದೆ.

ರಕ್ಷಣಾ ಖರೀದಿ ಮಂಡಳಿಯು ಖರೀದಿಗೆ ಅನುಮೋದನೆ ನೀಡಿರುವ ರಕ್ಷಣಾ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ಪಟ್ಟಿಯಲ್ಲಿರುವ ಕಣ್ಗಾವಲು ಹಡಗು, ಧ್ರುವಾಸ್ತ್ರ ಕ್ಷಿಪಣಿ, ಡಾರ್ನಿಯರ್‌ ವಿಮಾನ ಹಾಗೂ ಲಘು ಶಸ್ತ್ರ ಸಜ್ಜಿತ ಬಹುವ್ಯವಸ್ಥೆಯ ವಾಹನ

ರಕ್ಷಣಾ ಖರೀದಿ ಮಂಡಳಿಯು ಖರೀದಿಗೆ ಅನುಮೋದನೆ ನೀಡಿರುವ ರಕ್ಷಣಾ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ಪಟ್ಟಿಯಲ್ಲಿರುವ ಕಣ್ಗಾವಲು ಹಡಗು, ಧ್ರುವಾಸ್ತ್ರ ಕ್ಷಿಪಣಿ, ಡಾರ್ನಿಯರ್‌ ವಿಮಾನ ಹಾಗೂ ಲಘು ಶಸ್ತ್ರ ಸಜ್ಜಿತ ಬಹುವ್ಯವಸ್ಥೆಯ ವಾಹನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT