ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ಎಸಿಪಿ ಮಗನನ್ನು ಕಾಲುವೆಗೆ ತಳ್ಳಿದ ಸ್ನೇಹಿತರು: ಓರ್ವ ಆರೋಪಿ ಬಂಧನ

Published 27 ಜನವರಿ 2024, 4:24 IST
Last Updated 27 ಜನವರಿ 2024, 4:24 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಪೊಲೀಸ್ ಸಹಾಯಕ ಆಯುಕ್ತ(ACP)ರೊಬ್ಬರ ಪುತ್ರನನ್ನು ಆತನ ಇಬ್ಬರು ಸ್ನೇಹಿತರು ಹರಿಯಾಣದಲ್ಲಿ ಕಾಲುವೆಗೆ ತಳ್ಳಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆತನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಎಸಿಪಿ ಪುತ್ರ ಲಕ್ಷ್ಯ ಚೌಹಾಣ್(26) ಅವರನ್ನು ಸ್ನೇಹಿತರು ಕಾಲುವೆಗೆ ತಳ್ಳಿದ್ದಾರೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವನ ಪತ್ತೆಗೆ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ:

ಚೌಹಾಣ್, ತನ್ನ ಇಬ್ಬರು ಗೆಳೆಯರಾದ ವಿಕಾಸ್ ಭಾರದ್ವಾಜ್ ಮತ್ತು ಅಭಿಷೇಕ್ ಅವರೊಂದಿಗೆ ಸೋಮವಾರ ಹರಿಯಾಣದ ಸೋನೆಪತ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದರು. ಆದರೆ ಮರುದಿನ ಪುತ್ರ ಮನೆಗೆ ಹಿಂದಿರುಗದ ಕಾರಣ ಎಸಿಪಿ ಯಶ್ಪಾಲ್ ಸಿಂಗ್, ಮಂಗಳವಾರ ನಾಪತ್ತೆ ದೂರು ದಾಖಲಿಸಿದ್ದರು.

ಉತ್ತರ ದೆಹಲಿಯ ಸಮಯಪುರ ಬದ್ಲಿ ಪ್ರದೇಶದಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದ ಚೌಹಾಣ್ ವಕೀಲರಾಗಿದ್ದು, ‌ಇಲ್ಲಿನ ತೀಸ್ ಹಜಾರಿ ನ್ಯಾಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದರು. ಆತನ ಸ್ನೇಹಿತ ಭಾರದ್ವಾಜ್ ಮತ್ತೊಬ್ಬ ವಕೀಲರ ಬಳಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಅಭಿಷೇಕ್ (19) ಆತನ ಪರಿಚಯಸ್ಥನಾಗಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಗುರುವಾರ ಅಭಿಷೇಕ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ಸಮಯದಲ್ಲಿ, ಸೋಮವಾರ ಮಧ್ಯಾಹ್ನ ಭಾರದ್ವಾಜ್ ತನಗೆ ಕರೆ ಮಾಡಿ, ಸೋನೆಪತ್‌ನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತನಗೆ ಮತ್ತು ಚೌಹಾಣ್‌ ಗೆ ಆಹ್ವಾನಿಸಿದ್ದಾಗಿ ಅಭಿಷೇಕ್ ಹೇಳಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

ಚೌಹಾಣ್ ತನ್ನಿಂದ ಸಾಲ ಪಡೆದಿದ್ದ. ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗಲೆಲ್ಲಾ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಭಾರದ್ವಾಜ್ ಹೇಳಿದ್ದ. ಹಾಗಾಗಿ ಇಬ್ಬರು ಸೇರಿ ಆತನನ್ನು ಮುಗಿಸಲು ಯೋಜಿಸಿದ್ದಾಗಿ ಆತ ಹೇಳಿದ್ದಾನೆ.

ಸೋಮವಾರ ರಾತ್ರಿಯ ಹೊತ್ತಿಗೆ ಮದುವೆ ಕಾರ್ಯದಲ್ಲಿ ಭಾಗಿಯಾಗಿ 12 ಗಂಟೆಯ ನಂತರ ಅಲ್ಲಿಂದ್ದ ಹೊರಟಿದ್ದರು. ವಾಪಸ್‌ ಬರುವಾಗ ಬಹಿರ್ದೆಸೆಗಾಗಿ ಮೂವರು ಮುನಕ್ ಕಾಲುವೆ ಬಳಿ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿದರು. ಈ ವೇಳೆ ಭಾರದ್ವಾಜ್ ಮತ್ತು ಅಭಿಷೇಕ್ ಚೌಹಾಣ್‌ನನ್ನು ಕಾಲುವೆಗೆ ತಳ್ಳಿ ಆತನ ಕಾರಿನಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದರು.

ಬಳಿಕ ಆರೋಪಿಗಳು ದೆಹಲಿ ತಲುಪಿದ್ದಾರೆ. ಭಾರದ್ವಾಜ್ ನರೇಲಾದಲ್ಲಿ ಅಭಿಷೇಕ್‌ನನ್ನು ಬಿಟ್ಟು ಹೊರಟು ಹೋಗಿದ್ದ. ಗುರುವಾರ ನರೇಲಾದಲ್ಲಿರುವ ಆತನ ಮನೆಯಿಂದ ಅಭಿಷೇಕ್ ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶಕ್ಕೆ ಯತ್ನ ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT