ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತನ ಮಗಳ ಮೇಲೆ ಅತ್ಯಾಚಾರವೆಸಗಿದ ಅಧಿಕಾರಿ: ಅಮಾನತುಗೊಳಿಸಿ ದೆಹಲಿ ಸಿಎಂ ಆದೇಶ

Published 21 ಆಗಸ್ಟ್ 2023, 10:53 IST
Last Updated 21 ಆಗಸ್ಟ್ 2023, 10:53 IST
ಅಕ್ಷರ ಗಾತ್ರ

ನವದೆಹಲಿ: ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿ, ಆಕೆ ಗರ್ಭ ಧರಿಸಲು ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ (ಡಬ್ಲ್ಯುಸಿಡಿ) ಉಪ ನಿರ್ದೇಶಕ ಪ್ರೇಮೋದಯ್‌ ಖಾಖರ್ ಅವರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಬಾಲಕಿಗೆ ಗರ್ಭಪಾತದ ಔಷಧ ನೀಡಿದ ಆರೋಪದ ಮೇಲೆ ಆರೋಪಿ ಪತ್ನಿಯನ್ನೂ ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2020ರ ಅಕ್ಟೋಬರ್‌ 1ರಂದು ಬಾಲಕಿ ತಂದೆ (ಆರೋಪಿಯ ಸ್ನೇಹಿತ‌) ಮೃತಪಟ್ಟಿದ್ದರು. ನಂತರ ಆಕೆ, ಆರೋಪಿಯ ಕುಟುಂಬದೊಂದಿಗೆ ಉತ್ತರ ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ವಾಸವಿದ್ದಳು. 2021ರ ಜನವರಿಯಲ್ಲಿ ಬಾಲಕಿ ತನ್ನ ಮನೆಗೆ ಹಿಂದಿರುಗಿದ್ದು, ಸದ್ಯ 12ನೇ ತರಗತಿ ಓದುತ್ತಿದ್ದಾಳೆ.

‘ನವೆಂಬರ್‌ 2020ರಿಂದ ಜನವರಿ 2021ರ ಅವಧಿಯಲ್ಲಿ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಖಾಖರ್‌ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಕರಣ ಬಹಿರಂಗಗೊಂಡಿದ್ದು ಹೇಗೆ?:

ಅನಾರೋಗ್ಯದಿಂದ ಬಳಲುತ್ತಿದ್ದ ‌ಬಾಲಕಿಯನ್ನು ಆಕೆಯ ತಾಯಿ ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಸಮಾಲೋಚನೆ ವೇಳೆ ಬಾಲಕಿ ವೈದ್ಯರ ಬಳಿ, ಖಾಖರ್‌ ಅತ್ಯಾಚಾರ ನಡೆಸಿದ ಬಗ್ಗೆ ಹಾಗೂ ಗರ್ಭ ಧರಿಸಿದ್ದ ಆಕೆಗೆ ಖಾಖರ್‌ ಪತ್ನಿ ಗರ್ಭಪಾತಕ್ಕೆ ಔಷಧ ನೀಡಿದ ಬಗ್ಗೆ ಹೇಳಿಕೊಂಡಿದ್ದಳು. ಆಸ್ಪತ್ರೆ ಅಧಿಕಾರಿಗಳು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಪೋಕ್ಸೊ ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಮಾನತಿಗೆ ಆದೇಶ:

ಆರೋಪಿ ಅಧಿಕಾರಿಯನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆದೇಶಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ನರೇಶ್‌ ಕುಮಾರ್ ಅವರಿಗೆ ಸೂಚಿಸಿದ್ದಾರೆ.

‘ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಾದಾಗಿನಿಂದ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದೇವೆ. ಮಹಿಳೆಯರ ಸುರಕ್ಷತೆ ಮತ್ತು ಮಕ್ಕಳ ಶೋಷಣೆ ವಿಚಾರದಲ್ಲಿ ಸರ್ಕಾರವು ಸಂವೇದನಾಶೀಲವಾಗಿದೆ. ಆರೋಪಿ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ದೆಹಲಿ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಇದಕ್ಕೂ ಮುನ್ನ ದೆಹಲಿ ಮಹಿಳಾ ಆಯೋಗವು ಆರೋಪಿ ಬಂಧನಕ್ಕೆ ಆಗ್ರಹಿಸಿ ಪೊಲೀಸರಿಗೆ ನೋಟಿಸ್‌ ಕಳುಹಿಸಿತ್ತು.

ಆರೋಪಿ ಮನೆ ಪರಿಶೀಲನೆ: 

ಈ ಮಧ್ಯೆ ಅತ್ಯಾಚಾರ ಆರೋಪಿಯ ಇಲ್ಲಿನ ನಿವಾಸಕ್ಕೆ ಪೊಲೀಸರ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ರಕ್ಷಣೆ ಮಾಡಬೇಕಾದವರೇ ಶೋಷಣೆ ಮಾಡಿದರೆ ಹೆಣ್ಣು ಮಕ್ಕಳು ಎಲ್ಲಿಗೆ ಹೋಗಬೇಕು?
–ಸ್ವಾತಿ ಮಾಲೀವಾಲ್‌  ದೆಹಲಿ ಮಹಿಳಾ ಆಯೋಗ ಆಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT