ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಣೆ ನಿಲ್ದಾಣದಲ್ಲಿ Air India ವಿಮಾನಕ್ಕೆ ಟ್ರ್ಯಾಕ್ಟರ್ ಡಿಕ್ಕಿ: ಹಾರಾಟ ರದ್ದು

Published 17 ಮೇ 2024, 10:07 IST
Last Updated 17 ಮೇ 2024, 10:07 IST
ಅಕ್ಷರ ಗಾತ್ರ

ಪುಣೆ: ದೆಹಲಿ ಮೂಲದ ಏರ್ ಇಂಡಿಯಾ ವಿಮಾನವು ಪುಣೆಯಿಂದ ಹೊರಡುವ ಸಂದರ್ಭದಲ್ಲಿ ಸಾಮಾನು ಸರಂಜಾಮು ಸಾಗಿಸುವ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ, ತನ್ನ ಹಾರಾಟವನ್ನು ರದ್ದುಪಡಿಸಿದೆ.

ಈ ಸಂದರ್ಭದಲ್ಲಿ ಸುಮಾರು 200 ಪ್ರಯಾಣಿಕರು ವಿಮಾನದಲ್ಲಿದ್ದರು. ಘಟನೆ ನಂತರ ವಿಮಾನ ರದ್ದಾಗಿದ್ದರಿಂದ ಅವರೆಲ್ಲರೂ ಆರು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಮೂಲಗಳು ತಿಳಿಸಿವೆ.

‘ಈ ಘಟನೆಯು ಗುರುವಾರ ಸಂಜೆ 4ರ ಸುಮಾರಿಗೆ ನಡೆದಿದೆ. ಪ್ರಯಾಣಿಕರಿಗೆ ಅವರ ಪ್ರಯಾಣ ಶುಲ್ಕವನ್ನು ಸಂಪೂರ್ಣ ಹಿಂದಿರುಗಿಸಲಾಗಿದೆ. ಪರ್ಯಾಯವಾಗಿ ಉಚಿತವಾಗಿ ಅವರ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಮುಂದೆ ಅಂತರರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸುವವರಿಗೆ ಇತರ ವಿಮಾನಗಳಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗಿದೆ. ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.

‘ಗುರುವಾರ ಸಂಜೆ 4ರ ಹೊತ್ತಿಗೆ ನಾವೆಲ್ಲರೂ ವಿಮಾನದಲ್ಲಿ ಕುಳಿತಿದ್ದೆವು. ಟೇಕ್‌ಆಫ್‌ಗೆ ವಿಮಾನ ರನ್‌ವೇಯತ್ತ ಹೊರಟಿತ್ತು. ಈ ಸಂದರ್ಭದಲ್ಲಿ ಟ್ರಾಲಿ ಎಳೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆಯಿತು. ಇದಾದ ನಂತರ ವಿಮಾನದೊಳಗೇ ನಾವು ಒಂದು ಗಂಟೆ ಕಳೆಯಬೇಕಾಯಿತು. ಘಟನೆ ಕುರಿತು ಆಗಾಗ ಪೈಲೆಟ್ ಮಾಹಿತಿ ನೀಡುತ್ತಿದ್ದರು. ನಂತರ ನಮ್ಮನ್ನು ವಿಮಾನದಿಂದ ಇಳಿಸಲಾಯಿತು’ ಎಂದು ಶಹಾಬ್ ಜಾಫ್ರಿ ಎಂಬ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.

‘ನಂತರ ವಿಮಾನ ನಿಲ್ದಾಣದಲ್ಲೇ ಆರು ಗಂಟೆ ಕಳೆದೆವು. ಪ್ರಯಾಣಿಕರ ಕೋರಿಕೆ ಮೇರೆಗೆ ಸಂಜೆ 7.30ಕ್ಕೆ ಆಹಾರ, ಪಾನೀಯ ವ್ಯವಸ್ಥೆಯನ್ನು ವಿಮಾನಯಾನ ಸಂಸ್ಥೆ ಮಾಡಿತು. ಕೆಲವರಿಗೆ ಈ ಪ್ರಯಾಣದ ನಂತರ ಮತ್ತೊಂದು ವಿಮಾನ ಹಿಡಿಯುವ ತುರ್ತು ಇತ್ತು. ಬಹುಶಃ ಅದು ಅವರಿಗೆ ಕೈತಪ್ಪಿರುತ್ತದೆ. 9.55ಕ್ಕೆ ಮತ್ತೊಂದು ವಿಮಾನ ಆಯೋಜಿಸಲಾಯಿತು. ಅದು 10.20ಕ್ಕೆ ಪುಣೆಯಿಂದ ಹೊರಟಿತು. ದೆಹಲಿ ತಲಪುವ ಹೊತ್ತಿಗೆ ಮಧ್ಯರಾತ್ರಿ 12.20 ಆಗಿತ್ತು’ ಎಂದಿದ್ದಾರೆ.

‘ಏರ್ ಇಂಡಿಯಾದ ಅಧಿಕೃತ ಪ್ರಕಟಣೆಯಲ್ಲಿ ಈ ಎಲ್ಲಾ ಮಾಹಿತಿ ಇರಲಿಲ್ಲ. ಪುಣೆಯಿಂದ ದೆಹಲಿಗೆ ಹೋಗುವ ವಿಮಾನಕ್ಕೆ ರನ್‌ವೇಗೆ ಎಳೆಯುವ ಪೂರ್ವದಲ್ಲಿ ತೊಂದರೆ ಉಂಟಾಯಿತು. ಪರಿಶೀಲನೆಗಾಗಿ ಅದರ ಹಾರಾಟ ಸ್ಥಗಿತಗೊಳಿಸಿ, ಅಲ್ಲಿಯೇ ನಿಲ್ಲಿಸಲಾಗಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಪರ್ಯಾಯ ವಿಮಾನವನ್ನು ಉಚಿತವಾಗಿ ಆಯೋಜಿಸಲಾಗಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT