ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮಕ್ಕಳಿಗೆ ಪುಸ್ತಕ, ಮೊಹಲ್ಲಾ ಕ್ಲಿನಿಕ್‌ಗೆ ಔಷಧ ಸಿಗುತ್ತಿದೆಯೇ– ಕೇಜ್ರಿವಾಲ್

Published 29 ಏಪ್ರಿಲ್ 2024, 9:38 IST
Last Updated 29 ಏಪ್ರಿಲ್ 2024, 9:38 IST
ಅಕ್ಷರ ಗಾತ್ರ

ನವದೆಹಲಿ: ‘ಶಾಲೆಗಳಲ್ಲಿ ಮಕ್ಕಳಿಗೆ ಪುಸ್ತಕಗಳು ಸರಿಯಾಗಿ ಸಿಗುತ್ತಿದೆಯೇ...? ಮೊಹಲ್ಲಾ ಕ್ಲಿನಿಕ್‌ಗಳಿಗೆ ಔಷಧ ಪೂರೈಕೆ ಸರಿಯಾಗಿ ಆಗುತ್ತಿದೆಯೇ...?’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಳಿದರು’ ಎಂಬ ಸಂಗತಿಯನ್ನು ದೆಹಲಿ ಸಚಿವೆ ಅತಿಶಿ ಹೇಳಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸದ್ಯ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅವರ ಪತ್ನಿ ಸುನಿತಾ ಜತೆ ಸೋಮವಾರ ಭೇಟಿ ಮಾಡಿದ ಅತಿಶಿ ಈ ವಿಷಯ ಹಂಚಿಕೊಂಡಿದ್ದಾರೆ.

‘ಮುಖ್ಯಮಂತ್ರಿ ಅವರು ತಮ್ಮ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಳ್ಳುವ ಬದಲು, ಶಾಲಾ ಮಕ್ಕಳು, ಆಸ್ಪತ್ರೆ ನಿರ್ವಹಣೆ ಕುರಿತಾಗಿಯೇ ಪ್ರಶ್ನೆಗಳನ್ನು ಕೇಳಿದರು’ ಎಂದು ತಿಳಿಸಿದ್ದಾರೆ.

'ಬೇಸಿಗೆಯಲ್ಲಿ ನಾಗರಿಕರಿಗೆ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ತಾಯಂದಿರು ಹಾಗೂ ಸೋದರಿಯರಿಗೆ ತಿಳಿಸಿ, ನಾನು ಬೇಗನೆ ಜೈಲಿನಿಂದ ಹೊರಬರುತ್ತೇನೆ. ₹1000 ಸಮ್ಮಾನ ನೀಡುವ ಕುರಿತು ಕ್ರಮ ವಹಿಸುತ್ತೇನೆ ಎಂದು ತಿಳಿಸಿ. ನನ್ನ ಆರೋಗ್ಯದ ಚಿಂತೆಯನ್ನು ಬಿಡಿ. ದೆಹಲಿ ನಿವಾಸಿಗಳ ಚಿಂತೆ ಮಾಡಿ’ ಎಂದು ನಿರ್ದೇಶನ ನೀಡಿದ್ದಾರೆ ಎಂದು ಅತಿಶಿ ತಿಳಿಸಿದ್ದಾರೆ.

ತಮ್ಮ ಪತಿಯನ್ನು ಭೇಟಿ ಮಾಡಲು ಅವಕಾಶ ಕೋರಿ ಸುನಿತಾ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ತಿಹಾರ್ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದರು. ಆದರೆ ಸೋಮವಾರ ಭೇಟಿ ಮಾಡಲು ಅವಕಾಶ ನೀಡಿದ್ದಾರೆ ಎಂದು ಎಎಪಿ ಹೇಳಿತ್ತು.

ಆದರೆ ಎಎಪಿ ಆರೋಪವನ್ನು ಜೈಲು ಅಧಿಕಾರಿಗಳು ತಳ್ಳಿಹಾಕಿದ್ದರು.

ಪಂಜಾಬ್‌ನ ಮುಖ್ಯಮಂತ್ರಿ ಭಗವಂತ ಮಾನ್ ಅವರು ಕೇಜ್ರಿವಾಲ್ ಅವರನ್ನು ಮಂಗಳವಾರ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಮಾರ್ಚ್ 21ರಂದು ಬಂಧನವಾಗಿರುವ ಕೇಜ್ರಿವಾಲ್ ಅವರನ್ನು ತಿಹಾರ್ ಕಾರಾಗೃಹದಲ್ಲಿಡಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT