ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ಅಕ್ರಮ: ದೇಶದ ವಿವಿಧೆಡೆ ಕಾಂಗ್ರೆಸ್‌ ಪ್ರತಿಭಟನೆ

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹ - ‘ಸುಪ್ರೀಂ’ ಮೇಲ್ವಿಚಾರಣೆಯಲ್ಲಿ ತನಿಖೆಗೆ ಒತ್ತಾಯ
Published 21 ಜೂನ್ 2024, 14:37 IST
Last Updated 21 ಜೂನ್ 2024, 14:37 IST
ಅಕ್ಷರ ಗಾತ್ರ

ನವದೆಹಲಿ: ‘ನೀಟ್‌–ಯುಜಿ’ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಮತ್ತು ನೀಟ್‌ ಮರು ಪರೀಕ್ಷೆಗೆ ಆಗ್ರಹಿಸಿ ಕಾಂಗ್ರೆಸ್‌ ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಲಖನೌ, ರಾಂಚಿ, ಚಂಡೀಗಢ, ಜೈಪುರ, ಕೋಹಿಮಾ ಸೇರಿದಂತೆ ದೇಶದ ವಿವಿಧೆಡೆ ಶುಕ್ರವಾರ ಪ್ರತಿಭಟನೆ ನಡೆಸಿದೆ.

ಕೇಂದ್ರ ಸರ್ಕಾರ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿದರು. ಎನ್‌ಟಿಎ ಮುಖ್ಯಸ್ಥರ ವಿರುದ್ಧ ಮತ್ತು ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.

ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆಗಳು ಜರುಗಿದವು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ನಾಯಕರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಈ ವಿಷಯ ಕುರಿತು ಕಾಂಗ್ರೆಸ್‌ ಸಂಸತ್ತಿನಲ್ಲಿ ಧ್ವನಿಯೆತ್ತಲಿದೆ ಎಂದು ಪಕ್ಷದ ನಾಯಕರು ಹೇಳಿದರು. ವಿವಿಧೆಡೆ ಪ್ರತಿಭಟನೆ ಕೈಗೊಂಡಿದ್ದ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಪ್ರಮುಖ ಆಗ್ರಹಗಳು

  • ಮೇ 5ರಂದು ನಡೆದಿದ್ದ ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸಬೇಕು.

  • ನೀಟ್‌ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು.

  • ಪರೀಕ್ಷೆ ಬರೆದ ಅಭ್ಯರ್ಥಿಗಳು ಮತ್ತು ಪೋಷಕರ ಆತಂಕ ದೂರ ಮಾಡುವ ಹೊಣೆಯನ್ನು ಪ್ರಧಾನಿ ನಿರ್ವಹಿಸುತ್ತಿಲ್ಲ. ಅವರು ಇನ್ನೂ ಏಕೆ ಮೌನವಾಗಿದ್ದಾರೆ.

  • ಪರೀಕ್ಷಾ ನಿರ್ವಹಣೆಯಲ್ಲಿನ ಲೋಪದ ಹೊಣೆಯನ್ನು ಸರ್ಕಾರವೇ ಹೊರಬೇಕು. ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯವನ್ನು ರಕ್ಷಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು.

  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.

  • ಗುಜರಾತ್‌, ಬಿಹಾರ ಪೊಲೀಸರು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದ್ದರೂ ಪರೀಕ್ಷಾ ಅಕ್ರಮಗಳ ಕುರಿತು ಸರ್ಕಾರ ಏಕೆ ಮೌನವಹಿಸಿದೆ.

  • ಶಿಕ್ಷಣವನ್ನು ರಾಜಕೀಯಗೊಳಿಸಬಾರದು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯಬೇಕು.

ನೀಟ್‌ ಪರೀಕ್ಷಾ ಅಕ್ರಮ ವಿರೋಧಿಸಿ ಮುಂಬೈನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು – ಪಿಟಿಐ ಚಿತ್ರ
ನೀಟ್‌ ಪರೀಕ್ಷಾ ಅಕ್ರಮ ವಿರೋಧಿಸಿ ಮುಂಬೈನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು – ಪಿಟಿಐ ಚಿತ್ರ
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದಲ್ಲಿ ರಾಜಕೀಯ ಮಾಡದೇ ಅಕ್ರಮ ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಮಾಯಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು
– ಮಾಯಾವತಿ ಅಧ್ಯಕ್ಷೆ ಬಿಎಸ್‌ಪಿ

ದೆಹಲಿ ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ:

ಯೋಗ ದಿನಕ್ಕೆ ಹಾಜರಾಗದ ಪ್ರಧಾನ್‌ ನವದೆಹಲಿ (ಪಿಟಿಐ): ದೆಹಲಿ ವಿಶ್ವವಿದ್ಯಾಲಯದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಬೇಕಿದ್ದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೆಲ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಿಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ‘ನೀಟ್‌– ಯುಜಿ’ ಮತ್ತು ಯುಜಿಸಿ– ನೆಟ್‌ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಎಡಪಂಥೀಯ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (ಎಐಎಸ್‌ಎ) ಸದಸ್ಯರು ವಿಶ್ವವಿದ್ಯಾಲಯದ ಇತರ ವಿದ್ಯಾರ್ಥಿಗಳೊಂದಿಗೆ ಕ್ಯಾಂಪಸ್‌ನಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಬೆಳಿಗ್ಗೆ 6 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿದ್ದ ಸಚಿವ ಪ್ರಧಾನ್‌ ಅವರು ಕೆಲ ತುರ್ತು ಕೆಲಸದ ಕಾರಣ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ದೆಹಲಿ ವಿ.ವಿ ಅಧಿಕಾರಿಗಳು ತಿಳಿಸಿದರು. ‘ಪ್ರತಿಭಟನೆಯ ಕಾರಣ ಸಚಿವರು ವಿ.ವಿಯ ಉತ್ತರ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ’ ಎಂದು ದೆಹಲಿ ವಿ.ವಿ ಎಐಎಸ್‌ಎ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ. ‘ಭ್ರಷ್ಟ ಮತ್ತು ದುರಹಂಕಾರಿ ಶಿಕ್ಷಣ ಸಚಿವರನ್ನು ನಮ್ಮ ವಿಶ್ವವಿದ್ಯಾಲಯಕ್ಕೆ ಸ್ವಾಗತಿಸಲು ಆಗುವುದಿಲ್ಲ. ಅವರು ಮತ್ತು ಎನ್‌ಟಿಎಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಆಗಿದೆ’ ಅದು ಹೇಳಿದೆ.  ಪ್ರಧಾನ್‌ ಅವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು ಮತ್ತು ಎನ್‌ಟಿಎ ಅನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಆಗ್ರಹಿಸಿದರು.

ಬಿಜೆಪಿ ಭ್ರಷ್ಟಾಚಾರ ದೇಶವನ್ನು ದುರ್ಬಲಗೊಳಿಸಿದೆ: ಪ್ರಿಯಾಂಕಾ
‘ಬಿಜೆಪಿ ಆಡಳಿತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವು ದೇಶದ ಕೋಟ್ಯಂತರ ಯುವ ಜನರ ಭವಿಷ್ಯವನ್ನು ಹಾಳು ಮಾಡಿದೆ. ಕಳೆದ ಐದು ವರ್ಷಗಳಲ್ಲಿ ದೇಶದ 43 ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.  ನೀಟ್‌–ಯುಜಿ ಮತ್ತು ಯುಜಿಸಿ–ನೆಟ್‌ ಪರೀಕ್ಷಾ ಅಕ್ರಮಗಳ ಕುರಿತು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು ‘ಭಾರತವು ವಿಶ್ವದಲ್ಲಿಯೇ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ದೇಶ. ನಮ್ಮ ಯುವ ಜನರನ್ನು ಸಮರ್ಥರನ್ನಾಗಿ ಮಾಡುವ ಬದಲಿಗೆ ಬಿಜೆಪಿ ಸರ್ಕಾರವು ಅವರನ್ನು ದುರ್ಬಲಗೊಳಿಸುತ್ತಿದೆ’ ಎಂದು ‘ಎಕ್ಸ್‌’ನಲ್ಲಿ ಆರೊಪಿಸಿದ್ದಾರೆ.  ‘ಕೋಟ್ಯಂತರ ಪ್ರತಿಭಾವಂತ ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದುತ್ತಾರೆ. ನೇಮಕಾತಿಗಾಗಿ ವರ್ಷಗಟ್ಟಲೆ ಕಾಯುತ್ತಾರೆ. ಇದಕ್ಕಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾರೆ. ಪೋಷಕರೂ ಅವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿ ಅವರ ಅಧ್ಯಯನದ ಹೊರೆಯನ್ನು ಹೊರುತ್ತಾರೆ. ಆದರೆ ಪರೀಕ್ಷಾ ಅಕ್ರಮ ಭ್ರಷ್ಟಾಚಾರ ಅವರ ಎಲ್ಲ ಶ್ರಮವನ್ನು ವ್ಯರ್ಥ ಮಾಡುತ್ತಿದೆ. ಬಿಜೆಪಿಯ ಭ್ರಷ್ಟಾಚಾರವು ಇಡೀ ದೇಶವನ್ನೇ ದುರ್ಬಲಗೊಳಿಸುತ್ತಿದೆ’ ಎಂದು ಅವರು ದೂರಿದ್ದಾರೆ.

ಯೋಗ ದಿನಕ್ಕೆ ಹಾಜರಾಗದ ಪ್ರಧಾನ್‌

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಬೇಕಿದ್ದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಕೆಲ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಿಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು.

‘ನೀಟ್‌– ಯುಜಿ’ ಮತ್ತು ಯುಜಿಸಿ– ನೆಟ್‌ ಅಕ್ರಮಗಳನ್ನು ವಿರೋಧಿಸಿ ಎಡಪಂಥೀಯ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (ಎಐಎಸ್‌ಎ) ಸದಸ್ಯರು ವಿಶ್ವವಿದ್ಯಾಲಯದ ಇತರ ವಿದ್ಯಾರ್ಥಿಗಳೊಂದಿಗೆ ಕ್ಯಾಂಪಸ್‌ನಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಬೆಳಿಗ್ಗೆ 6 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿದ್ದ ಸಚಿವ ಪ್ರಧಾನ್‌ ಅವರು ಕೆಲ ತುರ್ತು ಕೆಲಸದ ಕಾರಣ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ದೆಹಲಿ ವಿ.ವಿ ಅಧಿಕಾರಿಗಳು ತಿಳಿಸಿದರು.

‘ಭ್ರಷ್ಟ ಮತ್ತು ದುರಹಂಕಾರಿ ಶಿಕ್ಷಣ ಸಚಿವರನ್ನು ನಮ್ಮ ವಿಶ್ವವಿದ್ಯಾಲಯಕ್ಕೆ ಸ್ವಾಗತಿಸಲು ಆಗುವುದಿಲ್ಲ. ಅವರು ಮತ್ತು ಎನ್‌ಟಿಎಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಆಗಿದೆ’ ಎಂದು ದೆಹಲಿ ವಿ.ವಿ ಎಐಎಸ್‌ಎ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT