ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಪು ಕೋಟೆ ಹಿಂಸಾಚಾರ: ನಟ ದೀಪ್ ಸಿಧು 7 ದಿನ ಪೊಲೀಸರ ವಶಕ್ಕೆ

ಫಾಲೋ ಮಾಡಿ
Comments

ನವದೆಹಲಿ: ನಟ ಮತ್ತು ಹೋರಾಟಗಾರ ದೀಪ್‌ ಸಿಧು ಅವರನ್ನು ದೆಹಲಿ ಕೋರ್ಟ್‌ 7 ದಿನಗಳವರೆಗೂ ಪೊಲೀಸ್‌ ಕಸ್ಟಡಿಗೆ ನೀಡಿ ಮಂಗಳವಾರ ಆದೇಶಿಸಿದೆ.

ಗಣರಾಜ್ಯೋತ್ಸವ ದಿನದಂದು (ಜನವರಿ 26) ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸಿದ ಟ್ರ್ಯಾಕ್ಟರ್‌ ರ್‍ಯಾಲಿಯ ಸಂದರ್ಭದಲ್ಲಿ ಕೆಂಪು ಕೋಟಿಯ ಸಮೀಪ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪ್‌ ಸಿಧು ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರೇರೇಪಣೆ ನೀಡಿದವರಲ್ಲಿ ಈತ ಪ್ರಮುಖ ವ್ಯಕ್ತಿ ಎಂದು ಪೊಲೀಸರು ಆರೋಪಿಸಿದ ಬೆನ್ನಲ್ಲೇ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪ್ರಿಗ್ಯಾ ಗುಪ್ತಾ, ಸಿಧು ಅವರನ್ನು ಏಳು ದಿನಗಳು ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದರು.

ದೀಪ್‌ ಸಿಧು ಪರ ವಕಾಲತ್ತು ವಹಿಸಿದ್ದವರು, ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡದಂತೆ ದೆಹಲಿ ಕೋರ್ಟ್‌ಗೆ ಮನವಿ ಮಾಡಿದರು. ಹಿಂಸಾಚಾರಕ್ಕೂ ಇವರಿಗೂ ಯಾವುದೇ ಸಂಬಂಧವಿಲ್ಲ, ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿದ್ದರು ಎಂದು ವಾದಿಸಿದರು.

ನಟ ದೀಪ್‌ ಸಿಧು ಸೇರಿದಂತೆ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದವರಿಗೆ ₹1 ಲಕ್ಷ ಹಾಗೂ ಬೂಟಾ ಸಿಂಗ್, ಸುಖ್‌ದೇವ್ ಸಿಂಗ್ ಮತ್ತು ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ₹50,000 ನಗದು ಪುರಸ್ಕಾರ ಘೋಷಣೆ ಮಾಡಿದ್ದರು.

ಜನವರಿ 26 ರಂದು ನಡೆದ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಘಟನೆಯಲ್ಲಿ ಒಬ್ಬ ರೈತ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT