ನವದೆಹಲಿ (ಪಿಟಿಐ): ನಂಗಾಲೋಯಿ ಪ್ರದೇಶದಲ್ಲಿ ಇತ್ತೀಚೆಗೆ ಮೊಹರಂ ಮೆರವಣಿಗೆಯಲ್ಲಿ ಅಶಿಸ್ತಿನಿಂದ ವರ್ತಿಸಿ, ಕಲ್ಲುತೂರಾಟ ನಡೆಸಿದ್ದ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಶಹಿಲ್ ಸಲ್ಮಾನಿ (25), ಅಸ್ಲಾಂ ಖುರೇಶಿ (37), ಸಮೀರ್ ಅಲಿಯಾಸ್ ಚೋಟಿ (23), ಶಹೀಲ್ ಖಾನ್ (21), ಅಜೀಂ (23) ಮತ್ತು ಶೋಹಿಬ್ (23) ಬಂಧಿತ ಆರೋಪಿಗಳು.
ಈ ಆರು ಜನ ಆರೋಪಿಗಳನ್ನು ಹೊರ ಜಿಲ್ಲೆಯ ಪೊಲೀಸ್ ತಂಡಗಳು ಗುರುತಿಸಿ ಬಂಧಿಸಿವೆ ಎಂದು ಉಪ ಪೊಲೀಸ್ ಆಯುಕ್ತ ಹರೇಂದ್ರ ಸಿಂಗ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜುಲೈ 29 ರಂದು ನಂಗಾಲೋಯಿ ಪ್ರದೇಶದಲ್ಲಿ ಸುಮಾರು ಎಂಟರಿಂದ 10 ಸಾವಿರ ಜನರು ತಾಜಿಯಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರೋಹ್ಟಕ್ ರಸ್ತೆಯಲ್ಲಿ ಮೆರವಣಿಗೆ ಸಾಗುವಾಗ, ಕೆಲವು ಕಿಡಿಗೇಡಿಗಳು ಪೂರ್ವ ನಿರ್ಧರಿತ ಮಾರ್ಗದಲ್ಲಿ ಸಾಗದೆ ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಯತ್ನಿಸಿ, ಸಾರ್ವಜನಿಕರನ್ನು ಪ್ರಚೋದಿಸಿ, ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಆರು ಪೊಲೀಸರು ಸೇರಿ 12 ಜನರು ಗಾಯಗೊಂಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.