ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಪರ ಪ್ರಚಾರ ನಡೆಸಿಲ್ಲ: ನ್ಯೂಸ್‌ಕ್ಲಿಕ್‌

Published 4 ಅಕ್ಟೋಬರ್ 2023, 16:26 IST
Last Updated 4 ಅಕ್ಟೋಬರ್ 2023, 16:26 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಪರ ಪ್ರಚಾರಾಂದೋಲನವನ್ನು ತಾನು ನಡೆಸುತ್ತಿಲ್ಲ ಎಂದು ನ್ಯೂಸ್‌ಕ್ಲಿಕ್‌ ಸುದ್ದಿತಾಣ ಹೇಳಿದೆ. ಇದೇ ಆರೋಪದ ಅಡಿಯಲ್ಲಿ ಈ ಸುದ್ದಿತಾಣದ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ಅಡಿಯಲ್ಲಿ ಮಂಗಳವಾರ ಬಂಧಿಸಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಟೀಕೆಗಳನ್ನು ದೇಶದ್ರೋಹ ಅಥವಾ ರಾಷ್ಟ್ರವಿರೋಧಿ ಕೃತ್ಯವೆಂಬಂತೆ ಕಾಣುತ್ತಿದೆ ಎಂದು ಸುದ್ದಿತಾಣವು ಟೀಕಿಸಿದೆ.

ಸುದ್ದಿತಾಣದಲ್ಲಿನ ವಸ್ತು–ವಿಷಯ ಏನಿರಬೇಕು ಎಂಬ ವಿಚಾರದಲ್ಲಿ ತಾನು ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಸೂಚನೆಗಳನ್ನು ಪಡೆದುಕೊಳ್ಳುತ್ತಿಲ್ಲ, ತಾನು ವಸ್ತು–ವಿಷಯದ ವಿಚಾರದಲ್ಲಿ ವೃತ್ತಿಯಲ್ಲಿನ ಅತ್ಯುನ್ನತ ಮಾನದಂಡಗಳನ್ನು ಪಾಲಿಸುತ್ತಿರುವುದಾಗಿ ನ್ಯೂಸ್‌ಕ್ಲಿಕ್ ಹೇಳಿದೆ.

ತಾನು ಪಡೆದಿರುವ ಹಣಕಾಸಿನ ನೆರವು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಬಂದಿದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ನ್ಯೂಸ್‌ಕ್ಲಿಕ್‌ ಹೇಳಿದೆ. 

‘ನಮ್ಮ ಅಧಿಕಾರಿಗಳ ಮೇಲೆ ಜಾರಿ ನಿರ್ದೇಶನಾಲಯ, ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಮೊದಲು ದಾಳಿ ನಡೆಸಿದ್ದಾರೆ. ಆದರೆ ಕೆಲವು ಡಿಜಿಟಲ್ ಸಾಧನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಹೊರತುಪಡಿಸಿದರೆ ಯಾವುದೇ ದೋಷಾರೋಪಪಟ್ಟಿ ಸಲ್ಲಿಸಿಲ್ಲ’ ಎಂದು ಅದು ಹೇಳಿದೆ.

 ಪೊಲೀಸ್‌ ವಶಕ್ಕೆ (ಪಿಟಿಐ ವರದಿ): ಪ್ರಬೀರ್ ಪುರಕಾಯಸ್ಥ ಮತ್ತು ನ್ಯೂಸ್‌ಕ್ಲಿಕ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಏಳು ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಇವರನ್ನು ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದರು.

ನ್ಯೂಸ್‌ಕ್ಲಿಕ್‌ ಮೇಲಿನ ಕ್ರಮವನ್ನು ವಿರೋಧಿಸಿ ಪತ್ರಕರ್ತರ ವಿವಿಧ ಸಂಘಟನೆಗಳು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಬಳಿ ಬುಧವಾರ ಪ್ರತಿಭಟನೆ ನಡೆಸಿವೆ. ಪತ್ರಕರ್ತರ ಕೆಲವು ಪ್ರಮುಖ ಸಂಘಟನೆಗಳು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂ‌ರ್ತಿ ಡಿ.ವೈ. ಚಂದ್ರಚೂಡ್ ಅವರು ಮಧ್ಯಪ್ರವೇಶಿಸಬೇಕು ಎಂದು ಕೋರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT