ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಜ್ಯೋತಿಷಿ ಪವರ್‌! 

Published 31 ಮೇ 2024, 23:45 IST
Last Updated 31 ಮೇ 2024, 23:45 IST
ಅಕ್ಷರ ಗಾತ್ರ

ಶುಭ್ರ ಬಿಳಿ ಬಣ್ಣದ ಜುಬ್ಬಾ, ಪ್ಯಾಂಟ್‌ ಹಾಕಿಕೊಂಡು, ಹಣೆಗೆ ಕುಂಕುಮ ಧರಿಸಿ ಅತೀವ ಶ್ರದ್ಧೆ, ವಿನಯದಿಂದ ಬಂದು ಎದುರು ಕುಳಿತ ಮುದ್ದಣ್ಣ. 

‘ಅಪಾರ ವಿಶ್ವಾಸದಿಂದ ನಿನ್ನ ಮೊಗ ಪ್ರಜ್ವಲಿಸುತ್ತಿದೆ. ಸಂಕಷ್ಟದಲ್ಲಿಯೂ ಇಷ್ಟು ಸಂತಸದಿಂದ ಇರಲು ಹೇಗೆ ಸಾಧ್ಯ ಅಣ್ಣ?’ ಕೇಳಿದ ವಿಜಿ. 

‘ಮೇಲಿನವನು ಹೇಳಿದಂತೆ ನಡೆದರೆ ಎಲ್ಲವೂ ಸಾಧ್ಯ’ ಸಮಾಧಾನದಿಂದ ಹೇಳಿದ ಮುದ್ದಣ್ಣ. 

‘ಮೇಲಿನವನು ಎಂದರೆ ದೇವರಾ?’ 

‘ಅಲ್ಲ. ನಮ್ಮ ಜ್ಯೋತಿಷಿ’.

‘ಜ್ಯೋತಿಷಿ ಮಾತು ಅಷ್ಟು ಮುಖ್ಯವೇ?’ 

‘ನಂಬಿಕೆ ಮುಖ್ಯ ವಿಜಿ. ನಂಬಿಕೆ ಇದ್ದರೆ ಯಾವುದೂ ಅಸಾಧ್ಯವಲ್ಲ’. 

‘ಜ್ಯೋತಿಷಿಗಳೇ ಮಾರ್ಗದರ್ಶನ ನೀಡಿದ್ದಾರೆ ಎಂದರೆ, ನೀವು ಯಾವುದೋ ಮಹಾ ಕಾರ್ಯಕ್ಕೆ ತೆರಳುತ್ತಿದ್ದೀರಿ ಅನಿಸುತ್ತೆ. ಅಲ್ವಾ ಅಣ್ಣ?’ 

‘ಪೊಲೀಸರ ಬಳಿಗೆ’ ತಣ್ಣಗೆ ಹೇಳಿದ ಮುದ್ದಣ್ಣ. 

‘ಅದ್ಯಾಕಣ್ಣ’ ಅಚ್ಚರಿಯಿಂದ ಕೇಳಿದ ವಿಜಿ.  

‘ಕೇಸ್ ಹಾಕಿದ್ದಾರೆ. ಅದಕ್ಕೆ ಹೋಗಬೇಕು?’ 

‘ತಿಂಗಳಿಂದಲೂ ಪೊಲೀಸರು ನಿಮಗಾಗಿ ಕಾಯುತ್ತಿದ್ದರೂ ಇವತ್ತೇ ಏಕೆ ಹೋಗ್ತಿದ್ದೀರಣ್ಣ?’ 

‘ಶುಕ್ರವಾರ ಪೊಲೀಸರ ಮುಂದೆ ಹೋದರೆ ನಿಮಗೆ ಏನೂ ತೊಂದರೆಯಾಗದು ಅಂತ ನಮ್ಮ ಜ್ಯೋತಿಷಿ ಹೇಳಿದ್ದಾರೆ. ಅದಕ್ಕೆ ಇವತ್ತೇ ಹೋಗ್ತಿದ್ದೀನಿ. ಆ ದೇವರಿದ್ದಾನೆ’.

‘ಕೆಟ್ಟ ಕೆಲಸ ಮಾಡಿ ದೇವರಿದ್ದಾನೆ ಅಂದರೆ ಹೇಗೆ’ ಅಂತ ಗುನುಗಿಕೊಂಡ ವಿಜಿ, ‘ಹೌದಣ್ಣ, ಆ ದೇವರೇ ನೋಡಿಕೊಳ್ತಾನೆ ಬಿಡಿ’ ಎಂದ ಜೋರಾಗಿ. 

ಮುದ್ದಣ್ಣನ ಬಂಧನವಾಯಿತು. ‘ಅಯ್ಯೋ, ಜ್ಯೋತಿಷಿ ಹೇಳಿದ್ದಾರೆ ಅಂತ ಶುಕ್ರವಾರ ಪೊಲೀಸರ ಬಳಿ ಹೋಗಿದ್ದರು ನಮ್ಮಣ್ಣ. ಆದರೂ ಅರೆಸ್ಟ್‌ ಆಗಿಬಿಡ್ತು’ ಟಿ.ವಿ ನೋಡುತ್ತಾ ಹೇಳಿದ ವಿಜಿ. 

‘ಪೊಲೀಸಿನವರೂ ಜ್ಯೋತಿಷಿ ಬಳಿ ಹೋಗಿದ್ದರಂತೆ. ಮಹಿಳೆಯರು ದುರ್ಗೆಯ ರೂಪ. ಐವರು ಮಹಿಳೆಯರೇ ಅರೆಸ್ಟ್‌ ಮಾಡಿದರೆ ಗ್ಯಾರಂಟಿ ಶಿಕ್ಷೆಯಾಗುತ್ತೆ ಅಂತ ಅವರಿಗೆ ಹೇಳಿದರಂತೆ. ಅದಕ್ಕೆ ಲೇಡಿ ಆಫೀಸರ್ಸ್‌ ಬಂಧಿಸಿದ್ದಾರೆ. ಯಾವ ಜ್ಯೋತಿಷಿ ಭವಿಷ್ಯ ನಿಜವಾಗುತ್ತೋ ನೋಡೋಣ’ ಎಂದು ನಕ್ಕಳು ವಿಜಿಯ ಪತ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT