ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕಿತರ ಬೆಂಬಲದಿಂದ ಕುಸ್ತಿಪಟುಗಳ ಪ್ರತಿಭಟನೆ ವಿಶ್ವಾಸಾರ್ಹತೆ ಕಳೆದುಕೊಂಡಿದೆ: ಲೇಖಿ

Published 4 ಮೇ 2023, 11:18 IST
Last Updated 4 ಮೇ 2023, 11:18 IST
ಅಕ್ಷರ ಗಾತ್ರ

ನವದೆಹಲಿ : ಕಳಂಕಿತ ರಾಜಕಾರಣಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದರಿಂದ ಕುಸ್ತಿಪಟುಗಳ ಪ್ರತಿಭಟನೆ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಪರೋಕ್ಷವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಟಾಂಗ್‌ ನೀಡಿದ್ದಾರೆ.

ಉತ್ತರ ಪ್ರದೇಶದ ಸಂಸದ, ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಕುಸ್ತಿಪಟುಗಳು, ಬ್ರಿಜ್‌ ಭೂಷಣ್‌ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಏಪ್ರಿಲ್‌ 23ರಿಂದ ಜಂತರ್‌ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಬುಧವಾರ ರಾತ್ರಿ ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ಘರ್ಷಣೆಯಾಗಿದ್ದು, 'ಕುಡಿದು ಬಂದು ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿದ್ದರು' ಎಂದು ಕುಸ್ತಿಪಟುಗಳು ಆರೋಪಿಸಿದ್ದರು.ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲೇಖಿ, ‘ಕೇಂದ್ರವು ಕುಸ್ತಿಪಟುಗಳು ಅದರಲ್ಲಿಯೂ ಮಹಿಳಾ ಕುಸ್ತಿಪಟುಗಳ ಸಮಸ್ಯೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಕರಣವು ಸುಪ್ರೀಂಕೋರ್ಟ್‌ ಮುಂದೆ ಇದ್ದು, ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರವಾಗಿ ಈ ವಿಷಯವನ್ನು ನಿರ್ವಹಿಸುತ್ತಿದ್ದೇವೆ‘ ಎಂದರು.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಕುಸ್ತಿಪಟುಗಳಿಗೆ ಬೆಂಬಲ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಲೇಖಿ, ‘ಕಳಂಕಿತ ರಾಜಕಾರಣಿಗಳ ಪ್ರವೇಶದಿಂದ ಕುಸ್ತಿಪಟುಗಳ ಪ್ರತಿಭಟನೆ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ‘ ಎಂದು ಹೇಳಿದರು.

‘ಜಾರಿ ನಿರ್ದೇಶನಾಯದ ಮುಂದೆ ಸಿಕ್ಕಿಬಿದ್ದು ತನಿಖೆ ಎದುರಿಸುತ್ತಿರುವ, ಅಬಕಾರಿ ಹಗರಣದಲ್ಲಿ ಭಾಗಿಯಾಗಿರುವ, ಸಾರ್ವಜನಿಕ ಹಣ ₹45 ಕೋಟಿಯಲ್ಲಿ ಬಂಗಲೆ(ಶೀಶ್ ಮಹಲ್) ನವೀಕರಣ ಮಾಡಿಕೊಂಡಿದ್ದಾರೆ ಎಂಬ ಆರೋಪ ಹೊತ್ತಿರುವ ವ್ಯಕ್ತಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದರಿಂದ ಪ್ರತಿಭಟನೆಯ ಮೇಲಿನ ನಂಬಿಕೆ ಕುಸಿದಿದೆ‘ ಎಂದು ಹೇಳಿದರು.

‘ಕಳಂಕಿತ ರಾಜಕಾರಣಿಗಳು ಪ್ರತಿಭಟನೆಯಲ್ಲಿ ಕುಳಿತರೆ ಪ್ರತಿಭಟನೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರಕರಣವು ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಇಂತಹ ಕಳಂಕಿತ ರಾಜಕಾರಣಿಗಳು ಸೇರಿಕೊಂಡಿದ್ದರಿಂದ ಪ್ರತಿಭಟನೆ ಬಗ್ಗೆ ಇನ್ನೇನು ಹೇಳಲು ಸಾಧ್ಯ?‘ ಎಂದು ಕೇಳಿದರು.

ಬಂಗಲೆ ನವೀಕರಣ ವಿಷಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಎಎಪಿ ನಾಯಕರು ಪ್ರಯತ್ನಿಸುತ್ತಿದ್ದು, ಕುಸ್ತಿಪಟುಗಳಿಗೆ ಬೆಂಬಲ ನೀಡುವ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಜಂತರ್‌ ಮಂತರ್‌ಗೆ ಭೇಟಿ ನೀಡಿ ಕುಸ್ತಿಪಟುಗಳಿಗೆ ಬೆಂಬಲ ನೀಡಿದ್ದರು. ದೇಶದ ಜನತೆ ಕುಸ್ತಿಪಟುಗಳ ಬೆನ್ನಿಗೆ ನಿಲ್ಲಬೇಕಿದೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ನವಜೋತ್‌ ಸಿಂಗ್‌, ಪ್ರಿಯಾಂಕಾ ಗಾಂಧಿ ಕೂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT