ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ ಆರೋಪಕ್ಕೆ ಪ್ರಜ್ವಲ್‌ ಪ್ರತ್ಯುತ್ತರ

‘ರಾಜ್ಯ ಹಿಂದುಳಿಯಲು ಭ್ರಷ್ಟ ಸರ್ಕಾರ ಕಾರಣ’
Last Updated 25 ಜೂನ್ 2019, 20:15 IST
ಅಕ್ಷರ ಗಾತ್ರ

ಮೈತ್ರಿ ಸರ್ಕಾರ ಭ್ರಷ್ಟ

ನವದೆಹಲಿ: ‘ದೇಶದ ಇತರ ರಾಜ್ಯಗಳು ಅಭಿವೃದ್ಧಿಯ ಪಥದತ್ತ ಸಾಗಿದ್ದರೆ, ಅತ್ಯಂತ ಭ್ರಷ್ಟ ಆಡಳಿತ ವ್ಯವಸ್ಥೆಯಿಂದಾಗಿ ಕರ್ನಾಟಕ ಹಿಂದುಳಿಯುವಂತಾಗಿದೆ’ ಎಂದು ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.

ಲೋಕಸಭೆಯಲ್ಲಿ ಮಂಗಳವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಅವರು ಮಾತನಾಡಿದರು.

‘ವಿಜಯನಗರದ ಹಕ್ಕ–ಬುಕ್ಕ, ಕೃಷ್ಣದೇವರಾಯ, ಬೆಂಗಳೂರಿನ ಕೆಂಪೇಗೌಡ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ.ವಿಶ್ವೇಶ್ವರಯ್ಯ ಅವರಂತಹ ಉತ್ತಮ ಆಡಳಿತಗಾರರನ್ನು ಕಂಡಿರುವ ಕರ್ನಾಟಕದಲ್ಲಿ ಪ್ರಸ್ತುತ ಭ್ರಷ್ಟ ಸರ್ಕಾರ ಇರುವುದು ಕನ್ನಡಿಗರೆಲ್ಲರೂ ಹಿಂದುಳಿಯುವಂತಾಗಿದೆ’ ಎಂದುಆರೋಪಿಸಿದರು.

‘ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ನಗರವು ನಿಧಾನಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಸಾವಿರಾರು ಕೋಟಿ ವಂಚಿಸಿರುವ ಐಎಂಎ ಹಗರಣದ ಸೂತ್ರಧಾರಿ ವಿರುದ್ಧ 40 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಇಂತಹ ಅನೇಕ ಭ್ರಷ್ಟಾಚಾರದ ಪ್ರಕರಣಗಳು ನಿತ್ಯವೂ ಪತ್ತೆಯಾಗುತ್ತಿವೆ. ಜನ ಭ್ರಷ್ಟ ಆಡಳಿತ ವ್ಯವಸ್ಥೆಗೆ ಸಾಕ್ಷಿಯಾಗುತ್ತಿದ್ದಾರೆ’ ಎಂದು ಮೂದಲಿಸಿದರು.

‘ಕರ್ನಾಟಕದಲ್ಲಿ ಶೀಘ್ರವೇ ಹೊಸ ಸರ್ಕಾರ ಉದಯವಾಗಲಿದೆ. ನಮ್ಮ ಆಶಯ, ಅನುಭವ, ಚಿಂತನೆಗಳಿಗೆ ಹೊಸ ಸರ್ಕಾರ ಪುಷ್ಟಿ ನೀಡಲಿದೆ. ಹೊಸ ಕರ್ನಾಟಕದ ಉದಯದ ಹೊಣೆ ಯುವಕರ ಕೈಲಿದೆ’ ಎಂದರು.

ಬಿಜೆಪಿ ಸರ್ಕಾರವೇ ಭ್ರಷ್ಟ

‘ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರ ಅಸ್ತಿತ್ವದಲ್ಲಿದೆ’ ಎಂಬ ತೇಜಸ್ವಿ ಸೂರ್ಯ ಅವರ ಆರೋಪಕ್ಕೆ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದ ಅವಧಿಯಲ್ಲಿ ತೀವ್ರ ಭ್ರಷ್ಟಾಚಾರ ನಡೆದಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಮುಖ್ಯಮಂತ್ರಿ ಹಾಗೂ 14 ಸಚಿವರ ಹೆಸರು ಕೇಳಿ ಬಂದಿತ್ತು’ ಎಂದು ತಿರುಗೇಟು ನೀಡಿದರು.

‘ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಆದರೂ, ಸದನಕ್ಕೆ ತಪ್ಪು ಮಾಹಿತಿ ನೀಡುವುದು ಕೊಳಕು ರಾಜಕಾರಣಕ್ಕೆ ಉದಾಹರಣೆ’ ಎಂದು ಹೇಳಿದರು.

ತಮ್ಮ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮೈಸೂರು ಸಂಸದ ಪ್ರತಾಪಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಜ್ವಲ್‌, ಐಎಂಎ ವಂಚನೆ ಪ್ರಕರಣದ ತನಿಖೆ ಜಾರಿಯಲ್ಲಿದೆ. ಹಗರಣದಲ್ಲಿ ಶಾಸಕ ರೋಷನ್‌ ಬೇಗ್‌ ಹೆಸರು ಕೇಳಿ ಬಂದ ಕೂಡಲೇ ಸಮ್ಮಿಶ್ರ ಸರ್ಕಾರದ ಭಾಗವಾದ ಕಾಂಗ್ರೆಸ್‌ ಅವರನ್ನು ಪಕ್ಷದಿಂದಲೇ ಅಮಾನತು ಮಾಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹಲವು ರೈತರು ಕಳೆದ ವರ್ಷ ತೀವ್ರ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಗಾಲದಿಂದ ಹಳೆ ಮೈಸೂರು ಭಾಗದ ಜನರುತತ್ತರಿಸಿದ್ದಾರೆ. ಜನತೆಗೆ ಕುಡಿಯಲು ಪೂರೈಸುವ ಉದ್ದೇಶದಿಂದ ಕೂಡಲೇ 2 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಿಸಲು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT