ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ‘ನೀಟ್’ ಪರೀಕ್ಷೆ ವಿರೋಧಿಸಿ ಡಿಎಂಕೆ ಉಪವಾಸ ಸತ್ಯಾಗ್ರಹ

ಆತ್ಮಹತ್ಯೆ ಮಾಡಿಕೊಂಡ ಆಕಾಂಕ್ಷಿಗಳ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಗೌರವ
Published 20 ಆಗಸ್ಟ್ 2023, 14:26 IST
Last Updated 20 ಆಗಸ್ಟ್ 2023, 14:26 IST
ಅಕ್ಷರ ಗಾತ್ರ

ಚೆನ್ನೈ: ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್) ರದ್ದುಪಡಿಸುವಂತೆ ಒತ್ತಾಯಿಸಿ ಆಡಳಿತಾರೂಢ ಡಿಎಂಕೆ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಭಾನುವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ ಹಾಗೂ ಸಚಿವ ಉದಯನಿಧಿ ನೇತೃತ್ವದಲ್ಲಿ ಇಲ್ಲಿನ ವಳ್ಳುವರ್ ಕೊಟ್ಟಮ್‌ನಲ್ಲಿ ನಡೆದ ಸತ್ಯಾಗ್ರಹದಲ್ಲಿ ಸಂಪುಟದ ಸಚಿವರು ಹಾಗೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಅರಿಯಲೂರಿನ ಎಸ್‌.ಅನಿತಾ ಸೇರಿದಂತೆ ‘ನೀಟ್‌’ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯದ ಆಕಾಂಕ್ಷಿಗಳ ಭಾವಚಿತ್ರಗಳನ್ನು ಸತ್ಯಾಗ್ರಹ ನಡೆದ ವೇದಿಕೆಯಲ್ಲಿ ಅಳವಡಿಸಿ, ಅವುಗಳಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಲಾಗಿತ್ತು.

ಡಿಎಂಕೆಯ ಯುವ ಘಟಕ, ವಿದ್ಯಾರ್ಥಿಗಳ ಹಾಗೂ ವೈದ್ಯರ ಘಟಕಗಳ ಪದಾಧಿಕಾರಿಗಳು ಕೂಡ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ನವದಂಪತಿಗಳು ಕೂಡ ನೀಟ್‌ ವಿರೋಧಿ ಫಲಕಗಳೊಂದಿಗೆ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವ ದೊರೈಮುರುಗನ್, ‘ನೀಟ್‌ ವಿದ್ಯಾರ್ಥಿ ವಿರೋಧಿಯಾಗಿದ್ದು, ಈ ಪರೀಕ್ಷೆಯನ್ನು ಡಿಎಂಕೆ ವಿರೋಧಿಸುತ್ತಲೇ ಬಂದಿದೆ’ ಎಂದರು.

ಮದುರೈನಲ್ಲಿ ನಡೆದ ಸತ್ಯಾಗ್ರಹ: ನೀಟ್‌ ವಿರೋಧಿಸಿ ರಾಜ್ಯದಾದ್ಯಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರೂ, ಮದುರೈನಲ್ಲಿ ನಡೆಯಲಿಲ್ಲ.

ಎಐಎಡಿಎಂಕೆ ವತಿಯಿಂದ ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಯುತ್ತಿದ್ದ ಕಾರಣ ಮದುರೈನಲ್ಲಿ ನೀಟ್‌ ವಿರೋಧಿ ಹೋರಾಟವನ್ನು ಹಮ್ಮಿಕೊಂಡಿರಲಿಲ್ಲ.

ಆಗಸ್ಟ್‌ 23ರಂದು ಮದುರೈನಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಡಿಎಂಕೆ ಮೂಲಗಳು ಹೇಳಿವೆ.

‘ನೀಟ್‌’ ರದ್ದತಿಗೆ ಆಗ್ರಹಿಸಿ ಚೆನ್ನೈನಲ್ಲಿ ಭಾನುವಾರ ಡಿಎಂಕೆ ವತಿಯಿಂದ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ವೇದಿಕೆಯಲ್ಲಿ ಅಳವಡಿಸಿದ್ದ ‘ನೀಟ್‌’ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾದ ಆಕಾಂಕ್ಷಿಗಳ ಭಾವಚಿತ್ರಗಳಿಗೆ ಸಚಿವ ಹಾಗೂ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಪುಷ್ಪನಮನ ಸಲ್ಲಿಸಿದರು
‘ನೀಟ್‌’ ರದ್ದತಿಗೆ ಆಗ್ರಹಿಸಿ ಚೆನ್ನೈನಲ್ಲಿ ಭಾನುವಾರ ಡಿಎಂಕೆ ವತಿಯಿಂದ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ವೇದಿಕೆಯಲ್ಲಿ ಅಳವಡಿಸಿದ್ದ ‘ನೀಟ್‌’ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾದ ಆಕಾಂಕ್ಷಿಗಳ ಭಾವಚಿತ್ರಗಳಿಗೆ ಸಚಿವ ಹಾಗೂ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಪುಷ್ಪನಮನ ಸಲ್ಲಿಸಿದರು –ಪಿಟಿಐ ಚಿತ್ರ

‘ನೀಟ್‌ನಿಂದ ವಿನಾಯಿತಿ: ಹೋರಾಟ ನಿಲ್ಲದು’

‘ನೀಟ್‌ನಿಂದ ರಾಜ್ಯಕ್ಕೆ ವಿನಾಯಿತಿ ನೀಡುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುವುದು. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶನಿವಾರ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನೀಟ್‌ ವಿರೋಧಿ ಮಸೂದೆಗೆ ಅಂಕಿತ ಹಾಕುವುದಿಲ್ಲ ಎಂಬುದಾಗಿ ಹೇಳಿರುವ ರಾಜ್ಯಪಾಲ ಆರ್‌.ಎನ್‌.ರವಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು ‘ಈ ವಿಷಯವು ಈಗ ರಾಷ್ಟ್ರಪತಿ ಅವರ ಮುಂದಿದೆ. ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಯನ್ನು ರಾಷ್ಟ್ರಪತಿಯವರಿಗೆ ಕಳುಹಿಸುವ ಪೋಸ್ಟ್‌ಮನ್ ರೀತಿಯ ಕೆಲಸ ಮಾತ್ರ ರಾಜ್ಯಪಾಲರದ್ದು’ ಎಂದರು.

ಅಣ್ಣಾಮಲೈ ಟೀಕೆ

‘ನೀಟ್’ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದ ಡಿಎಂಕೆ ನಡೆಯನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಟೀಕಿಸಿದ್ದಾರೆ. ‘ನೀಟ್ ವಿವಾದಾತ್ಮಕ ವಿಷಯವೇ ಅಲ್ಲ. ಡಿಎಂಕೆ ಇದನ್ನು ರಾಜಕೀಯಗೊಳಿಸುತ್ತಿದ್ದು ಭಾವನಾತ್ಮಕ ವಿಷಯವನ್ನಾಗಿ ಮಾಡಿದೆ. ಹಲವು ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಡಿಎಂಕೆಯ ಈ ನಡೆಯೇ ಕಾರಣ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT