ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿ ಕುರಿತ ರಾಹುಲ್ ಬೇಡಿಕೆಯನ್ನು ನೀವು ಬೆಂಬಲಿಸುತ್ತೀರಾ: ಧನ್‌ಕರ್‌ಗೆ ‘ಕೈ’

Published : 15 ಸೆಪ್ಟೆಂಬರ್ 2024, 11:34 IST
Last Updated : 15 ಸೆಪ್ಟೆಂಬರ್ 2024, 11:34 IST
ಫಾಲೋ ಮಾಡಿ
Comments

ನವದೆಹಲಿ: ಮೀಸಲಾತಿ ಕುರಿತಂತೆ ರಾಹುಲ್‌ ಗಾಂಧಿ ಹೇಳಿಕೆಯನ್ನು ಟೀಕಿಸಿರುವ ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್ ಅವರ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿ ಮಿತಿಯನ್ನು ಶೇ 50 ಮೀರಿ ವಿಸ್ತರಿಸಬೇಕೆಂಬ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬೇಡಿಕೆಯನ್ನು ನೀವು ಬೆಂಬಲಿಸುತ್ತೀರಾ ಎಂದು ಜಗದೀಪ್‌ ಧನ್‌ಕರ್ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.

‘ರಾಹುಲ್ ಗಾಂಧಿ ಅವರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿ ಮೇಲಿನ ಶೇಕಡ 50 ಮಿತಿಯನ್ನು ತೆಗೆದುಹಾಕಲು ಒತ್ತಾಯಿಸಿದ್ದಾರೆ. ನೀವು (ಜಗದೀಪ್‌ ಧನ್‌ಕರ್) ಕಾಂಗ್ರೆಸ್‌ನ ಈ ಬೇಡಿಕೆಯನ್ನು ಬೆಂಬಲಿಸುತ್ತೀರಾ?, ಇತ್ತೀಚೆಗೆ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು, ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ವ್ಯವಸ್ಥೆಯ ರದ್ದತಿ ಕುರಿತು ಕಾಂಗ್ರೆಸ್‌ ಪಕ್ಷ ಚಿಂತಿಸಲಿದೆ ಎಂದು ಹೇಳಿದ್ದರು. ಆದರೆ, ಅದು ಈಗ ಅಲ್ಲ’ ಎಂದು ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಂಬೈಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್ ಅವರು ಮೀಸಲಾತಿ ಕುರಿತ ಹೇಳಿಕೆಗೆ ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ್ದರು. ಜತೆಗೆ, ‘ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಇಂತಹ ನಿಲುವು ಅವರ ಸಂವಿಧಾನ ವಿರೋಧಿ ಮನಸ್ಥಿತಿ ತೋರಿಸಲಿದೆ’ ಎಂದಿದ್ದಾರೆ.

‘ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯು ವಿದೇಶಿ ನೆಲದಲ್ಲಿ ನಿಂತು ಮೀಸಲಾತಿ ಸೌಲಭ್ಯವು ಅಂತ್ಯವಾಗಬೇಕು ಎಂದು ಹೇಳುತ್ತಾರೆ. ಮೀಸಲಾತಿಯನ್ನು ಕುರಿತ ಪೂರ್ವಾಗ್ರಹ ಪೀಡಿತ ಧೋರಣೆಯು ಹೊಸ ಪೀಳಿಗೆಗೂ ವ್ಯಾಪಿಸಿದಂತಿದೆ. ಇದು, ಅದೇ ಹಳೆ ಸಂವಿಧಾನ ವಿರೋಧಿಯಾದ ಮನಸ್ಥಿತಿ’ ಎಂದು ಪರೋಕ್ಷವಾಗಿ ರಾಹುಲ್ ವಿರುದ್ಧ ಧನ್‌ಕರ್ ಕಿಡಿಕಾರಿದ್ದಾರೆ.

‘ಮೀಸಲಾತಿ ಮೆರಿಟ್ ವಿರುದ್ಧ ಅಲ್ಲ. ಅದು, ದೇಶ ಮತ್ತು ಸಂವಿಧಾನದ ಆತ್ಮ. ನಕಾರಾತ್ಮಕ ಕ್ರಿಯೆಯಲ್ಲ, ಬದ್ಧತೆ. ಇದು, ಕೆಲವ‌ರ ಅವಕಾಶವನ್ನು ಕಸಿಯುವುದಿಲ್ಲ. ಸಮಾಜದ ಆಧಾರಸ್ತಂಭವಾಗಿ ಇರುವವರ ಕೈಹಿಡಿಯಲಿದೆ. ಸಂವಿಧಾನವನ್ನು ಗೌರವಿಸುವ ಯಾರೊಬ್ಬರೂ ರಾಹುಲ್‌ ಗಾಂಧಿ ಅವರ ನಡೆಯನ್ನು ಒಪ್ಪುವುದಿಲ್ಲ’ ಎಂದು ಧನ್‌ಕರ್ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT