ಕೋಲ್ಕತ್ತ (ಪಶ್ಚಿಮ ಬಂಗಾಳ): ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವರದಿಯಾಗಿರುವ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರ ಕುರಿತ ತನಿಖೆಯ ಹೊಣೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕಲ್ಕತ್ತ ಹೈಕೋರ್ಟ್ ಶುಕ್ರವಾರ ಒಪ್ಪಿಸಿದೆ.
ಇದಕ್ಕೂ ಮೊದಲು ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಗೆ 'ವಿಶೇಷ ತನಿಖಾ ತಂಡ' ರಚಿಸಿತ್ತು.
ಈ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಹಾರದ ಬಗ್ಗೆ ಆರೋಪಗಳು ಕೇಳಿಬಂದ ಒಂದು ವರ್ಷದ ಬಳಿಕ ಎಸ್‌ಐಟಿ ರಚಿಸಿದ್ದು ಏಕೆ ಎಂದು ಪ್ರಶ್ನಿಸಿದೆ.
ಆಸ್ಪತ್ರೆಯ ಮಾಜಿ ಪ್ರಾಚಾರ್ಯ ಸಂದೀಪ್ ಘೋಷ್ ಅವರ ಅವಧಿಯಲ್ಲಿ ಹಣಕಾಸಿನ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿರುವ ಕಾಲೇಜಿನ ಮಾಜಿ ಉಪ ಸೂಪರಿಂಟೆಂಡೆಂಟ್ ಅಖ್ತರ್ ಅಲಿ, ಈ ಕುರಿತು ಜಾರಿ ನಿರ್ದೇಶನಾಲಯದಿಂದ (ಇ.ಡಿ) ತನಿಖೆ ನಡೆಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.