ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Dombivli Building collapse | 4 ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವು

Published 16 ಸೆಪ್ಟೆಂಬರ್ 2023, 2:52 IST
Last Updated 16 ಸೆಪ್ಟೆಂಬರ್ 2023, 2:52 IST
ಅಕ್ಷರ ಗಾತ್ರ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೂರ್ವ ಡೊಂಬಿವಿಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಮಹಿಳೆಯನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಥಿಲಗೊಂಡಿದ್ದ ಈ ಕಟ್ಟಡವನ್ನು ‘ಅಪಾಯಕಾರಿ’ ಎಂದು ನಗರಸಭೆ ಅಧಿಕಾರಿಗಳು ಈ ಹಿಂದೆಯೇ ಘೋಷಿಸಿದ್ದರು.

ಕಲ್ಯಾಣ ಡೊಂಬಿವಿಲಿ ನಗರಸಭೆ ವ್ಯಾಪ್ತಿಯ ಅಯರೆ ಪ್ರದೇಶದಲ್ಲಿರುವ ‘ಆದಿನಾರಾಯಣ್ ಭುವನ್‌’ ಎನ್ನುವ ಈ ಕಟ್ಟಡದಲ್ಲಿ 44 ಬಾಡಿಗೆದಾರು ಇದ್ದರು. ಗುರುವಾರ ಕಟ್ಟಡದ ಕೆಲ ಭಾಗಗಳು ಕುಸಿದು ಬಿದ್ದಿದ್ದರಿಂದ ಅವರನ್ನು ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಸಂಜೆ 5.40ರ ವೇಳೆಗೆ ಕಟ್ಟಡ ಕುಸಿದು ಬಿದ್ದಿದೆ. ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ರಾತ್ರಿ ಸುಮಾರು 8 ಗಂಟೆಯ ವೇಳೆ ಸುನಿಲ್ ಬ್ರಿಜಾ ಲೊಡಯಾ (55) ಎಂಬವರ ಮೃತದೇಹವನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ.

ರಾತ್ರಿ 9.15ರ ವೇಳೆಗೆ 54 ವರ್ಷದ ದೀಪ್ತಿ ಸುನಿಲ್ ಲೊಡಯಾ ಎಂಬವರನ್ನು ಅವಶೇಷಗಳ ಅಡಿಯಿಂದ ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ 70 ವರ್ಷದ ಅರವಿಂದ ಭಟ್ಕರ್‌ ಎಂಬವರ ಶವವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಮಂದಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದೆ.

ಇಬ್ಬರು ಆನಾರೋಗ್ಯ ಪೀಡಿತ ವ್ಯಕ್ತಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ಉಳಿದವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ಕಲ್ಯಾಣ ಡೊಂಬಿವಿಲಿ ನಗರಸಭೆಯ ಮುಖ್ಯಸ್ಥ ಬಹುಸಾಹೇಬ್‌ ಡಾಂಗೆ ಮಾಹಿತಿ ನೀಡಿದ್ದಾರೆ.

50 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಅಪಾಯಕಾರಿ ಎಂದು ಘೋಷಣೆ ಮಾಡಿ ಬಾಡಿಗೆದಾರರಿಗೆ ನೋಟಿಸ್ ನೀಡಲಾಗಿತ್ತು. ಕೆಲವರು ಕಟ್ಟಡ ತೊರೆದಿದ್ದರು. ಇನ್ನು ಕೆಲವರು ಅಲ್ಲಿಯೇ ಇದ್ದರು ಎಂದು ಡಾಂಗೆ ಹೇಳಿದ್ದಾರೆ.

ಗುರುವಾರ ಸಂಜೆ ಬಾಡಿಗೆದಾರರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿತ್ತು. ಈ ನಡುವೆ ಕಟ್ಟಡ ಕುಸಿದೆ ಎಂದು ಅವರು ತಿಳಿಸಿದ್ದಾರೆ.

ಇದೊಂದು ಅನಧಿಕೃತ ಕಟ್ಟಡವಾಗಿದ್ದು, ಅಪಾಯಕಾರಿ ಎಂದು ಈ ಹಿಂದೆಯೇ ಘೋಷಣೆ ಮಾಡಲಾಗಿತ್ತು ಎಂದು ಕಲ್ಯಾಣ ಡೊಂಬಿವಿಲಿ ನಗರಸಭೆಯ ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT