ಉತ್ತರಕಾಶಿ: ಉತ್ತರಾಖಂಡಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತರಲು ಮಾರ್ಗ ಸಿದ್ಧಪಡಿಸಲು ಅವಶೇಷಗಳ ಮೂಲಕ ಪೈಪ್‌ಲೈನ್ ಹಾಕುವಿಕೆ ಕಾರ್ಯವು ಶುಕ್ರವಾರ ಬೆಳಿಗ್ಗೆ ಮತ್ತೆ ಸ್ಥಗಿತಗೊಂಡಿದೆ. ಡ್ರಿಲ್ಲಿಂಗ್ ಯಂತ್ರ ನಿಂತಿರುವ ಸ್ಥಳದಲ್ಲಿ ಬಿರುಕು ಕಾಣಿಕೊಂಡಿದ್ದು, ಶಾಟ್‌ಕ್ರೆಟಿಂಗ್(ಬಿರುಕಿನ ಸ್ಥಳದಲ್ಲಿ ಕಾಂಕ್ರಿಟ್ ಹಾಕುವುದು) ಮೂಲಕ ಸ್ಥಿರಗೊಳಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡ್ರಿಲ್ಲಿಂಗ್ ಯಂತ್ರ ಇರುವ ಸ್ಥಳದಲ್ಲಿ ಬಿರುಕುಗಳು ಕಾಣಿಸಿಕೊಂಡ ನಂತರ ಅವಶೇಷಗಳ ಮೂಲಕ ಪೈಪ್ ಅಳವಡಿಕೆಗೆ ರಂಧ್ರ ಕೊರೆಯುವ ಕಾರ್ಯ ಗುರುವಾರವೂ ಸ್ಥಗಿತಗೊಂಡಿತ್ತು.
ಬುಧವಾರ ತಡರಾತ್ರಿ ಆಗರ್ ಯಂತ್ರಕ್ಕೆ ಅಡ್ಡ ಬಂದ ಕಬ್ಬಿಣದ ರಚನೆಯನ್ನು ಕತ್ತರಿಸಲು ಆರು ಗಂಟೆಗಳ ವಿಳಂಬದ ನಂತರ, ನಿನ್ನೆಯಿಂದ ಮತ್ತೆ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ನವೆಂಬರ್ 12ರಂದು ಉತ್ತರಾಖಂಡದ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಕುಸಿತದ ನಂತರ ಬಹು ಏಜೆನ್ಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ, ಪದೇ ಪದೇ ಅಡಚಣೆ ಎದುರಾಗಿದ್ದು, ರಂಧ್ರ ಕೊರೆಯುವ ಕಾರ್ಯ ಮೂರನೇ ಬಾರಿಗೆ ಸ್ಥಗಿತಗೊಳಿಸಲಾಗಿದೆ.
ಸುರಂಗದೊಳಗೆ ಸಿಲುಕಿಕೊಂಡಿರುವ ಕಾರ್ಮಿಕರು ಒತ್ತಡ ನಿವಾರಿಸಿಕೊಳ್ಳಲು ಒಳಗಿರುವ ಕಾರ್ಮಿಕರಿಗೆ ಚೆಸ್, ಲೂಡೊ ಆಟದ ಪರಿಕರಗಳನ್ನು ನೀಡಲು ಮುಂದಾಗಿದ್ದಾರೆ.