ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಔಷಧ ಗುಣಮಟ್ಟ: ಕೇಂದ್ರ–ರಾಜ್ಯದ ನಿಯಂತ್ರಕ ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಲಿ’

Last Updated 27 ಫೆಬ್ರುವರಿ 2023, 4:11 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದಲ್ಲಿ ತಯಾರಿಸಲಾಗುವ ಔಷಧಗಳು ಉತ್ಕೃಷ್ಟ ಗುಣಮಟ್ಟದಿಂದ ಕೂಡಿರಬೇಕು. ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳಲ್ಲಿನ ಔಷಧ ನಿಯಂತ್ರಕ ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಕೇಂದ್ರ ಆರೋಗ್ಯ ಮತ್ತು ಔಷಧೀಯ ಸಚಿವ ಮನ್ಸುಖ್‌ ಮಾಂಡವೀಯಾ ಹೇಳಿದ್ದಾರೆ.

ಭಾರತದಲ್ಲಿ ತಯಾರಾಗಿದ್ದ ಔಷಧಗಳ ಗುಣಮಟ್ಟದ ಬಗ್ಗೆ ಜಾಗತಿಕ ಮಟ್ಟದಲ್ಲಿ ಅಪಸ್ವರ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರು ಕೇಂದ್ರ ಹಾಗೂ ರಾಜ್ಯಗಳ ಔಷಧ ನಿಯಂತ್ರಕ ಸಂಸ್ಥೆಗಳು, ಆರೋಗ್ಯ ಅಧಿಕಾರಿಗಳು ಮತ್ತು ಔಷಧ ತಯಾರಿಕಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಹೈದರಾಬಾದ್‌ನಲ್ಲಿ ಭಾನುವಾರ ಮಹತ್ವದ ಸಭೆ ನಡೆಸಿ ಚರ್ಚಿಸಿದ್ದಾರೆ.

ಬಳಿಕ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯಗಳಲ್ಲಿನ ಔಷಧ ನಿಯಂತ್ರಕ ಸಂಸ್ಥೆಗಳು ಜೊತೆಯಾಗಿ ಕೆಲಸ ಮಾಡಿದರೆ ಔಷಧ ನಿಯಂತ್ರಕ ವ್ಯವಸ್ಥೆಯೊಳಗಿನ ಲೋಪದೋಷಗಳನ್ನು ಸರಿಪಡಿಸಬಹುದು’ ಎಂದು ತಿಳಿಸಿದ್ದಾರೆ.

ಭಾರತದ ಔಷಧಿ ತಯಾರಿಕಾ ಕಂಪನಿ ಮ್ಯಾರಿಯೊನ್‌ ಬಯೋಟೆಕ್‌ನ ಕೆಮ್ಮಿನ ಔಷಧ ‘ಡಾಕ್‌–1–ಮ್ಯಾಕ್ಸ್‌’ ಸೇವಿಸಿ 18 ಮಕ್ಕಳು ಮೃತಪಟ್ಟಿದ್ದಾಗಿ ಉಜ್ಬೇಕಿಸ್ತಾನವು 2022ರ ಡಿಸೆಂಬರ್‌ನಲ್ಲಿ ಆರೋಪಿಸಿತ್ತು. ಭಾರತದ ಮೈಡೇನ್‌ ಫಾರ್ಮಾಸ್ಯುಟಿಕಲ್ಸ್‌ ಲಿಮಿಟೆಡ್‌ ಕಂಪನಿ ತಯಾರಿಸಿದ್ದ ಕೆಮ್ಮಿನ ಔಷಧಿಯನ್ನು ಸೇವಿಸಿ ಗ್ಯಾಂಬಿಯಾದಲ್ಲಿ 2022ರ ಅಕ್ಟೋಬರ್‌ನಲ್ಲಿ 70 ಮಕ್ಕಳು ಅಸುನೀಗಿದ್ದರು. ಔಷಧಿ ತಯಾರಿಕಾ ಮಾನದಂಡಗಳನ್ನು ಉಲ್ಲಂಘಿಸಿದ್ದರಿಂದ ಈ ಕಂಪನಿಯ ಹರಿಯಾಣ ಘಟಕವನ್ನು ಮುಚ್ಚಲಾಗಿತ್ತು.

ಭಾರತದಲ್ಲಿ ತಯಾರಾಗಿದ್ದ ‘ಐ ಡ್ರಾಪ್‌’ನಿಂದ ಕಣ್ಣಿನ ಸೋಂಕುಗಳು, ಶಾಶ್ವತ ದೃಷ್ಟಿ ಹಾನಿ ಮತ್ತು ರಕ್ತಸ್ರಾವದಂತಹ ಸೋಂಕಿನಿಂದ ಸಂಭವಿಸಿದ ಸಾವು, ಆರೋಗ್ಯದ ಮೇಲಿನ ಪ್ರತಿಕೂಲ ಪರಿಣಾಮ ಸೇರಿ 55 ಪ್ರಕರಣಗಳು ವರದಿಯಾಗಿದ್ದಾಗಿ ಅಮೆರಿಕದ ಆರೋಗ್ಯ ನಿಯಂತ್ರಕವು ಹೇಳಿಕೆ ಬಿಡುಗಡೆ ಮಾಡಿತ್ತು.

‘ಭಾರತದಲ್ಲಿ ತಯಾರಾಗುವ ಔಷಧಗಳ ಗುಣಮಟ್ಟವು ಉತ್ಕೃಷ್ಟತೆಯಿಂದ ಕೂಡಿರಬೇಕು. ಈ ವಿಚಾರದಲ್ಲಿ ಗ್ರಾಹಕರ ನಂಬಿಕೆಯನ್ನು ಮರಳಿ ಗಳಿಸಬೇಕು. ಭಾರತದ ನಿಯಂತ್ರಕ ಸಂಸ್ಥೆಗಳು ಜಗತ್ತಿನಲ್ಲೇ ಅತ್ಯುತ್ತಮವಾದುವು ಎಂಬುದನ್ನೂ ಸಾಬೀತುಪಡಿಸಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT