ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗವು ಬದಲಾಯಿಸಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಗೆ ಯಾವುದು ಸರಿಹೊಂದುತ್ತದೆಯೋ ಅದನ್ನು ಮಾತ್ರ ಆಯೋಗ ಮಾಡುತ್ತದೆ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಅನವಶ್ಯಕವಾಗಿ ಚುನಾವಣಾ ಮತದಾನದ ದಿನಾಂಕವನ್ನು ಬದಲಾಯಿಸಿತ್ತು. ಎಲ್ಲವನ್ನು ಬಿಜೆಪಿ ಮತ್ತು ಅದರ ಪ್ರತಿನಿಧಿ ಪಕ್ಷಗಳ ಇಚ್ಛೆಯಂತೆ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
ಅಕ್ಟೋಬರ್ 4ರಂದು ನಿಗದಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮತ ಎಣಿಕೆ ದಿನಾಂಕವನ್ನು ಅಕ್ಟೋಬರ್ 8ಕ್ಕೆ ಮುಂದೂಡಿ ಚುನಾವಣಾ ಆಯೋಗ ಶನಿವಾರ ಘೋಷಿಸಿತ್ತು.
ಬಿಷ್ಣೋಯಿ ಸಮುದಾಯದವರ ಶತಮಾನದಷ್ಟು ಹಳೆಯದಾದ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಹರಿಯಾಣ ವಿಧಾನಸಭೆ ಚುನಾವಣೆಯ ಮತದಾನದ ದಿನಾಂಕವನ್ನು ಅಕ್ಟೋಬರ್ 5ಕ್ಕೆ ಮುಂದೂಡಿದ ಬೆನ್ನಲ್ಲೇ ಆಯೋಗ ಈ ನಿರ್ಧಾರ ಕೈಗೊಂಡಿದೆ.
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಒಟ್ಟು 90 ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸೆ.18ರಂದು 24 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸೆ. 25ರಂದು 2ನೇ ಹಂತ ಹಾಗೂ ಅ. 1ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ.