ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೇರುವಂತೆ ಆಹ್ವಾನ ಆರೋಪ: ಸಚಿವೆ ಆತಿಶಿಗೆ ಚುನಾವಣಾ ಆಯೋಗದಿಂದ ನೋಟಿಸ್

Published 5 ಏಪ್ರಿಲ್ 2024, 8:24 IST
Last Updated 5 ಏಪ್ರಿಲ್ 2024, 8:24 IST
ಅಕ್ಷರ ಗಾತ್ರ

ನವದೆಹಲಿ: ‘ಪಕ್ಷಕ್ಕೆ ಸೇರುವಂತೆ ಬಿಜೆಪಿಯು ನನ್ನ ಆಪ್ತರ ಮೂಲಕ ಸಂಪರ್ಕಿಸಿದೆ’ ಎಂದು ಆರೋಪಿಸಿದ್ದ ಎಎಪಿ ನಾಯಕಿ, ದೆಹಲಿಯ ಸಚಿವೆ ಅತಿಶಿ ಅವರಿಗೆ ಚುನಾವಣಾ ಆಯೋಗ ಶುಕ್ರವಾರ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ. ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಆಧಾರ ಸಹಿತ ಮಾಹಿತಿ ನೀಡುವಂತೆ ಆಯೋಗ ನೋಟಿಸ್‌ನಲ್ಲಿ ತಿಳಿಸಿದೆ.

ಅತಿಶಿ ಹೇಳಿಕೆಯ ಬೆನ್ನಲ್ಲೇ, ಅವರು ‘ಸುಳ್ಳು ಹೇಳಿಕೆ’ಗಳನ್ನು ನೀಡಿದ್ದಾರೆ ಎಂದು ಪ್ರತಿಪಾದಿಸಿದ್ದ ಬಿಜೆಪಿಯು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. 

ನೋಟಿಸ್‌ನಲ್ಲಿ ಏನಿದೆ: ‘ನೀವು ರಾಷ್ಟ್ರ ರಾಜಧಾನಿ ಪ್ರದೇಶದ ಸರ್ಕಾರದ ಸಚಿವರು ಮತ್ತು ರಾಷ್ಟ್ರೀಯ ಪಕ್ಷದ ನಾಯಕಿಯಾಗಿದ್ದೀರಿ. ನಾಯಕರು ನೀಡುವ ಹೇಳಿಕೆಗಳು ಮತದಾರರ ಮೇಲೆ ಪರಿಣಾಮ ಬೀರುತ್ತದೆ’ ಎಂದು ಆಯೋಗವು ನೋಟಿಸ್‌ನಲ್ಲಿ ಹೇಳಿದೆ.

‘ನೀವು ನೀಡುವ ಹೇಳಿಕೆಗಳು ವಾಸ್ತವದಿಂದ ಕೂಡಿರಬೇಕು ಎಂದು ಆಯೋಗ ನಿರೀಕ್ಷಿಸತ್ತದೆ. ನಿಮ್ಮ ಹೇಳಿಕೆಗಳ ಸತ್ಯಾಸತ್ಯತೆಯನ್ನು ಯಾರಾದರೂ ಪ್ರಶ್ನಿಸಿದಾಗ, ನೀವು ನಿಮ್ಮ ಹೇಳಿಕೆಗಳಿಗೆ ಸಂಬಂಧಿಸಿದ ಆಧಾರಗಳನ್ನು ಹೊಂದಿರಬೇಕಾಗುತ್ತದೆ’ ಎಂದು ಅದು ತಿಳಿಸಿದೆ. 

ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ಕಾನೂನು ನಿಬಂಧನೆಗಳ ಅಡಿಯಲ್ಲಿ ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಆಯೋಗವು, ಸೋಮವಾರ ಮಧ್ಯಾಹ್ನದೊಳಗೆ ಪ್ರತಿಕ್ರಿಯೆ ನೀಡುವಂತೆ ಸಚಿವೆ ಅತಿಶಿ ಅವರಿಗೆ ಸೂಚಿಸಿದೆ.  

ಏಪ್ರಿಲ್‌ 2ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅತಿಶಿ ಅವರು, ‘ರಾಜಕೀಯ ಭವಿಷ್ಯ ಉತ್ತಮಪಡಿಸಿಕೊಳ್ಳಲು ಬಿಜೆಪಿ ಪಕ್ಷಕ್ಕೆ ಸೇರಿ ಇಲ್ಲವೇ ತಿಂಗಳೊಳಗೆ ಜಾರಿ ನಿರ್ದೇಶನಾಲಯದಿಂದ ಬಂಧನ ಎದುರಿಸಲು ಸಿದ್ಧರಾಗಿರಿ ಎಂದು ಬಿಜೆಪಿಯು ನನ್ನನ್ನು ಸಂಪರ್ಕಿಸಿದೆ’ ಎಂದು ಆರೋಪಿಸಿದ್ದರು.  

ಆಯೋಗ ಬಿಜೆಪಿಯ ಅಂಗ ಸಂಸ್ಥೆಯೇ: ಅತಿಶಿ

ನವದೆಹಲಿ: ಚುನಾವಣಾ ಆಯೋಗದ ನೋಟಿಸ್‌ ಸ್ವೀಕರಿಸಿದ ಬೆನ್ನಲ್ಲೇ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಸಚಿವೆ ಅತಿಶಿ ‘ಚುನಾವಣಾ ಆಯೋಗವೇನು ಬಿಜೆಪಿಯ ಅಂಗಸಂಸ್ಥೆಯೇ’ ಎಂದು ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು ‘ಚುನಾವಣಾ ಆಯೋಗವು ನನಗೆ ಇ-ಮೇಲ್‌ ಮೂಲಕ ನೊಟಿಸ್‌ ಕಳುಹಿಸಿದೆ. ಆದರೆ ಅದಕ್ಕೂ ಒಂದು ಗಂಟೆ ಮುನ್ನವೇ ಅದು ಬಿಜೆಪಿಯಿಂದ ಮಾಧ್ಯಮಗಳಿಗೆ ಸೋರಿಕೆಯಾಗಿದೆ’ ಎಂದು ಆರೋಪಿಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿದಾಗ ಮತ್ತು ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದಾಗ ಚುನಾವಣಾ ಆಯೋಗವು ಸಂಬಂಧಿಸಿದ ಏಜೆನ್ಸಿಗಳಿಗೆ ಏಕೆ ನೋಟಿಸ್‌ಗಳನ್ನು ನೀಡಲಿಲ್ಲ ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಆಕ್ಷೇಪಾರ್ಹ ಹೋರ್ಡಿಂಗ್‌ ಮತ್ತು ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ಎಎಪಿ ಚುನಾವಣಾ ಆಯೋಗಕ್ಕೆ ಹಲವು ಪತ್ರಗಳನ್ನು ಬರೆದಿದೆ. ಆದರೆ ಅವುಗಳ ಮೇಲೆ ಏಕೆ ಯಾವುದೇ ಕ್ರಮವನ್ನು ಆಯೋಗ ಕೈಗೊಂಡಿಲ್ಲ ಎಂದು ಅವರು ಕೇಳಿದರು.  ನೋಟಿಸ್‌ಗೆ ಉತ್ತರಿಸುವುದಾಗಿ ಹೇಳಿದ ಅತಿಶಿ ಅವರು ಇದೇ ವೇಳೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ತಟಸ್ಥ ಮತ್ತು ಪಕ್ಷಾತೀತ ಧೋರಣೆಯನ್ನು ಹೊಂದಿರಬೇಕಾಗುತ್ತದೆ ಎಂಬುದನ್ನು ಆಯೋಗಕ್ಕೆ ನೆನಪಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT