ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣದಲ್ಲಿ ಜಾಹೀರಾತು ನಿಲ್ಲಿಸಿ: ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ತಾಕೀತು

Published 27 ನವೆಂಬರ್ 2023, 16:24 IST
Last Updated 27 ನವೆಂಬರ್ 2023, 16:24 IST
ಅಕ್ಷರ ಗಾತ್ರ

ನವದೆಹಲಿ: ತೆಲಂಗಾಣದ ಮಾಧ್ಯಮಗಳಲ್ಲಿ ತನ್ನ ಸಾಧನೆಗಳ ಬಗ್ಗೆ ಜಾಹೀರಾತು ನೀಡುವುದನ್ನು ನಿಲ್ಲಿಸಬೇಕು ಮತ್ತು ನೀತಿ ಸಂಹಿತೆ ಪ್ರಕಾರ ತನ್ನ ಪೂರ್ವಾನುಮತಿ ಪಡೆಯದೇ ಇರುವುದರ ಬಗ್ಗೆ ವಿವರಣೆ ನೀಡಬೇಕು ಎಂದು ಕರ್ನಾಟಕದ ಕಾಂಗ್ರೆಸ್‌ ಸರ್ಕಾರಕ್ಕೆ ಚುನಾವಣಾ ಆಯೋಗವು ಸೋಮವಾರ ಸೂಚಿಸಿದೆ.

ತೆಲಂಗಾಣದ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಅನುಮತಿ ಪಡೆದಿರಲಿಲ್ಲ ಎಂದು ಈ ಕುರಿತು ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಆಯೋಗ ತಿಳಿಸಿದೆ.

ಇದೇ 30ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ತೆಲಂಗಾಣದ ಮಾಧ್ಯಮ ಗಳಲ್ಲಿ ಜಾಹೀರಾತುಗಳನ್ನು ಬಿತ್ತರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿಯು ಸೋಮವಾರ ಬೆಳಿಗ್ಗೆ ಆಯೋಗಕ್ಕೆ ದೂರು ನೀಡಿತ್ತು.

ಈ ವಿಷಯದ ಬಗ್ಗೆ ಬಿಆರ್‌ಎಸ್‌ ಕೂಡ ಆಯೋಗದ ಗಮನ ಸೆಳೆದಿತ್ತು.

ಕರ್ನಾಟಕ ಸರ್ಕಾರದ ಕ್ರಮವು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದಿರುವ ಆಯೋಗವು  ಅಗತ್ಯ ಅನುಮತಿ ಪಡೆಯುವವರೆಗೂ ಸರ್ಕಾರದ ಜಾಹೀರಾತುಗಳ ಪ್ರಸಾರವನ್ನು ಕೂಡಲೇ ನಿಲ್ಲಿಸಬೇಕು ಎಂದು ತಾಕೀತು ಮಾಡಿದೆ.

ಮಂಗಳವಾರ ಸಂಜೆ 5 ಗಂಟೆ ಒಳಗೆ ವಿವರಣೆ ನೀಡಬೇಕು ಎಂದು ಕೂಡಾ ಸರ್ಕಾರಕ್ಕೆ ಸೂಚಿಸಿದೆ. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದು ಎಂದು ವಿವರಣೆ ನೀಡುವಂತೆಯೂ ಕರ್ನಾಟಕ ಸರ್ಕಾರಕ್ಕೆ ಕೇಳಿದೆ.

ಕರ್ನಾಟಕ ಸರ್ಕಾರವು ತೆಲುಗು ಭಾಷೆಯಲ್ಲಿ ಜಾಹೀರಾತು ನೀಡಿದೆ. ಇದು ಕರ್ನಾಟಕ ರಾಜ್ಯ ಭಾಷೆ ಅಲ್ಲ. ಕರ್ನಾಟಕದಲ್ಲಿ ಆರು ತಿಂಗಳುಗಳಲ್ಲಿ ಆಗಿದೆ ಎನ್ನಲಾದ ಸಾಧನೆಗಳ ಬಗ್ಗೆ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿ ಹೊಂದಿದೆ ಎಂದು ಹೇಳಿಕೊಂಡು ಜಾಹೀರಾತು ನೀಡಲಾಗಿದೆ ಎಂದು ಬಿಜೆಪಿ ನೀಡಿರುವ ದೂರಿನಲ್ಲಿ ಹೇಳಿತ್ತು.

ಜಾಹೀರಾತಿನಲ್ಲಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶಿವಕುಮಾರ್‌ ಮತ್ತು ಇತರ ಸಚಿವರುಗಳ ಚಿತ್ರವೂ ಇದೆ ಎಂದು ಅದು ತಿಳಿಸಿತ್ತು. ಕರ್ನಾಟಕ ಸರ್ಕಾರ, ಸಿದ್ದರಾಮಯ್ಯ, ಸಚಿವರುಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಬಿಜೆಪಿ ಆಯೋಗವನ್ನು ಒತ್ತಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT