ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ದಶಕಗಳ ಬಳಿಕ ನ್ಯಾಯ: 93 ವರ್ಷದ ಮಹಿಳೆಗೆ ಕೊನೆಗೂ ಸಿಕ್ಕಿತು ಫ್ಲ್ಯಾಟ್

Published 6 ಮೇ 2023, 12:25 IST
Last Updated 6 ಮೇ 2023, 12:25 IST
ಅಕ್ಷರ ಗಾತ್ರ

ಮುಂಬೈ: ಎಂಟು ದಶಕಗಳಷ್ಟು ಸುದೀರ್ಘ ಅವಧಿಯ ವ್ಯಾಜ್ಯವೊಂದಕ್ಕೆ ಬಾಂಬೆ ಹೈಕೋರ್ಟ್ ಮುಕ್ತಾಯ ಹಾಡಿದೆ. ದಕ್ಷಿಣ ಮುಂಬೈನ ಎರಡು ಫ್ಲ್ಯಾಟ್‌ಗಳನ್ನು 93 ವರ್ಷದ ಮಹಿಳೆಗೆ ಹಸ್ತಾಂತರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡುವ ಮೂಲಕ ಪ್ರಕರಣ ಅಂತ್ಯಗೊಳಿಸಿದೆ. 

ದಕ್ಷಿಣ ಮುಂಬೈನ ರೂಬಿ ಮ್ಯಾನ್ಷನ್‌ನ ಮೊದಲ ಮಹಡಿಯಲ್ಲಿರುವ 500 ಚದರ ಅಡಿ ಹಾಗೂ 600 ಚದರ ಅಡಿ ಅಳತೆಯ ಎರಡು ಫ್ಲ್ಯಾಟ್‌ಗಳನ್ನು ಅವುಗಳ ಮಾಲೀಕರಾದ ಅಲೈಸ್ ಡಿಸೋಜಾ ಅವರಿಗೆ ನೀಡುವಂತೆ ಕೋರ್ಟ್ ಆದೇಶಿಸಿದೆ.

ಹಿಂದೆ ಜಾರಿಯಲ್ಲಿದ್ದ ಭಾರತ ರಕ್ಷಣಾ ಕಾಯ್ದೆಯ ಅಡಿಯಲ್ಲಿ ಈ ಕಟ್ಟಡವನ್ನು 1942ರ ಮಾರ್ಚ್ 28ರಂದು ಅಂದಿನ ಬ್ರಿಟಿಷ್ ಸರ್ಕಾರ ವಶಕ್ಕೆ ಪಡೆದಿತ್ತು. ಆದರೆ, 1946ರ ಜುಲೈನಲ್ಲಿ ಈ ಕಟ್ಟಡವನ್ನು ವಾಪಸ್ ನೀಡುವಂತೆ ಆದೇಶವಿದ್ದರೂ, ಮಾಲೀಕರಿಗೆ ಹಸ್ತಾಂತರಿಸಿಲ್ಲ ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಆರ್.ಡಿ. ಧನುಕಾ ಮತ್ತು ಎಂ.ಎಂ. ಸಥಯೇ ಅವರು ಮೇ 4ರಂದು ಹೊರಡಿಸಿದ ಆದೇಶದಲ್ಲಿ ಹೇಳಿದ್ದಾರೆ.

1946ರ ಆದೇಶದ ಪ್ರಕಾರ ಫ್ಲ್ಯಾಟ್‌ಗಳನ್ನು ತಮಗೆ ಹಸ್ತಾಂತರಿಸಲು ಮಹಾರಾಷ್ಟ್ರ ಸರ್ಕಾರ ಹಾಗೂ ಜಿಲ್ಲಾಧಿಕಾರಿಗೆ ಆದೇಶ ನೀಡುವಂತೆ ಡಿಸೋಜಾ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು. ಆದರೆ, ಈ ಫ್ಲ್ಯಾಟ್‌ಗಳಲ್ಲಿ ಅಂದಿನ ಬ್ರಿಟಿಷ್ ಸರ್ಕಾರದ ಅಧಿಕಾರಿಯ ವಂಶಸ್ಥರು ವಾಸವಿದ್ದಾರೆ. ಅಧಿಕಾರಿ ಡಿ.ಎಸ್. ಲಾಡ್ ಎಂಬವರು 1940ರಲ್ಲಿ ಈ ಫ್ಲ್ಯಾಟ್‌ಗಳಲ್ಲಿ ವಾಸ ಆರಂಭಿಸಿದ್ದರು. ಲಾಡ್ ಅವರು ಅಂದಿನ ಸರ್ಕಾರದ ನಾಗರಿಕ ಸೇವಾ ಇಲಾಖೆಯ ಅಧಿಕಾರಿಯಾಗಿದ್ದರು. 

ಕಟ್ಟಡವನ್ನು ವಾಪಸ್ ನೀಡುವ ಆದೇಶವಿದ್ದರೂ, ಫ್ಲ್ಯಾಟ್‌ಗಳ ನಿಜವಾದ ಮಾಲೀಕರಾದ ತಮಗೆ ಅವುಗಳನ್ನು ಹಸ್ತಾಂತರಿಸಿಲ್ಲ. ಆದರೆ ಕಟ್ಟಡದ ಇತರೆ ಫ್ಲ್ಯಾಟ್‌ಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ಡಿಸೋಜಾ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದರು. ಮನೆಗಳನ್ನು ಅವುಗಳ ಮಾಲೀಕರಿಗೆ ಭೌತಿಕವಾಗಿ ಹಸ್ತಾಂತರಿಸಲಾಗಿಲ್ಲ, ಹೀಗಾಗಿ ಕಟ್ಟಡವನ್ನು ವಾಪಸ್ ನೀಡುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಕೋರ್ಟ್ ಹೇಳಿತು. 

ಫ್ಲ್ಯಾಟ್‌ಗಳನ್ನು ತೆರವುಗೊಳಿಸಿ, ಅವುಗಳ ನಿಜವಾದ ಮಾಲೀಕರಾದ ಡಿಸೋಜಾ ಅವರಿಗೆ ಹಸ್ತಾಂತರ ಮಾಡಬೇಕು ಎಂದಿರುವ ಕೋರ್ಟ್, ಇದಕ್ಕೆ ಎಂಟು ವಾರಗಳ ಕಾಲಾವಕಾಶ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT