ಸುಕ್ಮಾ: ‘ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಎಂಟು ನಕ್ಸಲರನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬನ ತಲೆಗೆ ₹1 ಲಕ್ಷ ಬಹುಮಾನ ಘೋಷಣೆಯಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ಬಸ್ತಾರ್ ಫೈಟರ್ಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತಂಡವು ಶುಕ್ರವಾರ ಜಾಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಬೈನಪಲ್ಲಿ ಗ್ರಾಮದ ಬಳಿ ಜಂಟಿ ಕಾರ್ಯಾಚರಣೆ ನಡೆಸಿ ನಕ್ಸಲರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರಲ್ಲಿ ಮುಚಕಿ ಪಾಲ (33) ಸೇನಾ ಕಮಾಂಡರ್ ಆಗಿದ್ದು, ಇತನ ತಲೆಗೆ ₹1 ಲಕ್ಷ ಬಹುಮಾನ ಘೋಷಣೆಯಾಗಿತ್ತು. ಮಡ್ಕಂ ಸನ್ನು (40) ಉಪ ಸೇನಾ ಕಮಾಂಡರ್ ಆಗಿದ್ದಾನೆ. ಉಳಿದವರು ಮಾವೋವಾದಿಗಳ ಹೋರಾಟ ಪಡೆಯ ಸದಸ್ಯರಾಗಿ ಸಕ್ರಿಯರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ನಾಲ್ಕು ಜಿಲೆಟಿನ್ ರಾಡ್‌ಗಳು, 200 ಗ್ರಾಂ ಗನ್‌ಪೌಡರ್, ನಾಲ್ಕು ಡಿಟೋನೇಟರ್‌ಗಳು, ಕಾರ್ಡೆಕ್ಸ್ ವೈರ್, ಪೆನ್ಸಿಲ್ ಸೆಲ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.