ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌: ಬಿಜೆಪಿಗೆ ₹6,987 ಕೋಟಿ ದೇಣಿಗೆ

Published 18 ಮಾರ್ಚ್ 2024, 0:30 IST
Last Updated 18 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ನವದೆಹಲಿ: ‘ಲಾಟರಿ ಕಿಂಗ್’ ಸ್ಯಾಂಟಿಯಾಗೊ ಮಾರ್ಟಿನ್ ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಆ್ಯಂಡ್‌ ಹೋಟೆಲ್‌ ಸರ್ವೀಸಸ್‌ ಸಂಸ್ಥೆಯು, ತಾನು ಖರೀದಿಸಿದ ₹1,368 ಕೋಟಿ ಮೊತ್ತದ ಚುನಾವಣಾ ಬಾಂಡ್‌ನಲ್ಲಿ ₹509 ಕೋಟಿಯನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ದೇಣಿಗೆ ನೀಡಿದೆ.

ಚುನಾವಣಾ ಬಾಂಡ್‌ ಮೂಲಕ ಬಿಜೆಪಿ ಅತಿಹೆಚ್ಚು ದೇಣಿಗೆ (₹6,987.38 ಕೋಟಿ) ಪಡೆದಿರುವ ಮಾಹಿತಿಯು, ಚುನಾವಣಾ ಆಯೋಗ ಭಾನುವಾರ ಬಿಡುಗಡೆಗೊಳಿಸಿದ ಹೊಸ ಅಂಕಿ–ಅಂಶದಲ್ಲಿ ಬಹಿರಂಗಗೊಂಡಿದೆ.

ಡಿಎಂಕೆಯು ಚುನಾವಣಾ ಬಾಂಡ್‌ ಮೂಲಕ ಪಡೆದ ಒಟ್ಟು ₹656 ಕೋಟಿ ಮೊತ್ತದಲ್ಲಿ, ಫ್ಯೂಚರ್‌ ಗೇಮಿಂಗ್‌ ನೀಡಿದ ದೇಣಿಗೆ ಪಾಲು ಶೇ 77ರಷ್ಟಾಗುತ್ತದೆ. ಡಿಎಂಕೆ, ಎಐಎಡಿಎಂಕೆ ಮತ್ತು ಜೆಡಿಎಸ್‌
ಸೇರಿದಂತೆ ಕೆಲವು ಪಕ್ಷಗಳನ್ನು ಹೊರತುಪಡಿಸಿ, ಉಳಿದ ಪಕ್ಷಗಳು ತಾವು ಯಾರಿಂದ ದೇಣಿಗೆ ಪಡೆದಿ
ದ್ದೇವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 

₹6 ಕೋಟಿ ಪಡೆದಿರುವ ಎಐಎಡಿಎಂಕೆಗೆ ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದಲೂ ದೇಣಿಗೆ ಲಭಿಸಿದೆ. ಸಿಪಿಎಂ, ಸಿಪಿಐ, ಬಿಎಸ್‌ಪಿ, ಫಾರ್ವರ್ಡ್‌ ಬ್ಲಾಕ್, ಎಐಎಂಐಎಂ, ಎಐಯುಡಿಎಫ್, ಎಂಎನ್‌ಎಸ್‌, ಮುಸ್ಲಿಂ ಲೀಗ್‌ ಮತ್ತು ಐಎನ್‌ಎಲ್‌ಡಿ ಪಕ್ಷಗಳು ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಪಡೆದಿಲ್ಲ ಎಂದು ಘೋಷಿಸಿಕೊಂಡಿವೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಸೇರಿದಂತೆ ಪ್ರಮುಖ ಪಕ್ಷಗಳು ದೇಣಿಗೆ ನೀಡಿದವರ ಮಾಹಿತಿ ಬಹಿರಂಗ
ಪಡಿಸದ ಕಾರಣ, ಫ್ಯೂಚರ್ ಗೇಮಿಂಗ್ ಖರೀದಿಸಿದ ಬಾಕಿ ₹859 ಕೋಟಿ ಮೌಲ್ಯದ ಬಾಂಡ್‌ಗಳ ಫಲಾನುಭವಿಗಳು ಯಾರೆಂಬುದು ತಿಳಿದುಬಂದಿಲ್ಲ. 

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೀಡಿದ್ದ ವಿವರಗಳ ಆಧಾರದಲ್ಲಿ ಚುನಾವಣಾ ಆಯೋಗವು ಮಾರ್ಚ್‌ 14ರಂದು ಬಿಡುಗಡೆಗೊಳಿಸಿದ್ದ ಮಾಹಿತಿಯು, 2019ರ ಏಪ್ರಿಲ್‌ 12ರಿಂದ 2024ರ ಫೆಬ್ರುವರಿ 15ರ ವರೆಗಿನ (ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸುವವರೆಗಿನ) ಅವಧಿಗೆ ಸಂಬಂಧಿಸಿದ್ದಾಗಿತ್ತು.

ಈಗ ಬಹಿರಂಗಗೊಂಡಿರುವ ಮಾಹಿತಿಯು ಈ ಯೋಜನೆಯ (2018) ಆರಂಭದಿಂದ 2023ರ ನವೆಂಬರ್‌ವರೆಗಿನ ಅವಧಿಯಲ್ಲಿ ಪಕ್ಷಗಳು ಪಡೆದ ದೇಣಿಗೆಗೆ ಸಂಬಂಧಿಸಿದ್ದಾಗಿದೆ. ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ 2023ರ ಅಕ್ಟೋಬರ್‌ನಿಂದ 2024ರ ಫೆಬ್ರುವರಿವರೆಗಿನ ಅವಧಿಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ಜೆಡಿಎಸ್‌ಗೆ ₹89.75 ಕೋಟಿ

ಜೆಡಿಎಸ್‌ ಪಕ್ಷವು ಚುನಾವಣಾ ಬಾಂಡ್‌ ಮೂಲಕ ₹89.75 ಕೋಟಿ ದೇಣಿಗೆ ಪಡೆದಿದೆ. ಅದರಲ್ಲಿ ₹50 ಕೋಟಿಯನ್ನು ಮೇಘಾ ಎಂಜಿನಿಯರಿಂಗ್‌ ಆ್ಯಂಡ್‌ ಇನ್ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ನಿಂದ (ಎಂಇಐಎಲ್‌)  ಪಡೆದಿದೆ. ಎಂಇಐಎಲ್‌ ವಿವಿಧ ಪಕ್ಷಗಳಿಗೆ ಒಟ್ಟು ₹966 ಕೋಟಿ ದೇಣಿಗೆ ನೀಡಿದೆ.

2018ರ ಮಾರ್ಚ್‌ 20ರಿಂದ 2023ರ ಸೆಪ್ಟೆಂಬರ್‌ 30ರ ವರೆಗೆ ಪಡೆದ ದೇಣಿಗೆಯ ಮಾಹಿತಿಯನ್ನು ಜೆಡಿಎಸ್‌ ಘೋಷಿಸಿಕೊಂಡಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಅಂದರೆ 2019ರ ಮಾರ್ಚ್‌ 19ರಂದು ಮೇಘಾ ಕಂಪನಿ, ಜೆಡಿಎಸ್‌ಗೆ ₹10 ಕೋಟಿ ನೀಡಿತ್ತು. ಇದೇ ಕಂಪನಿಯು ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ 2023ರ ಏಪ್ರಿಲ್‌ 18ರಂದು ಪಕ್ಷಕ್ಕೆ ₹40 ಕೋಟಿ ದೇಣಿಗೆ ನೀಡಿದೆ. 

ಎಂಬೆಸಿ ಡೆವಲಪರ್ಸ್‌ ಸಂಸ್ಥೆಯು 2018ರ ಚುನಾವಣೆ ಘೋಷಣೆಗೂ ಮುನ್ನ ₹22 ಕೋಟಿ ಹಾಗೂ 2018ರ ಮೇ 17 ರಂದು ₹10 ಕೋಟಿ ನೀಡಿದೆ. ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ (₹5 ಕೋಟಿ), ಜೆಎಸ್‌ಡಬ್ಲ್ಯು ಸ್ಟೀಲ್‌ ಲಿಮಿಟೆಡ್ (₹4 ಕೋಟಿ), ಅಮರರಾಜಾ ಗ್ರೂಪ್ಸ್ (₹2 ಕೋಟಿ) ಮತ್ತು ಇನ್ಫೊಸಿಸ್ (₹1 ಕೋಟಿ)– ಜೆಡಿಎಸ್‌ಗೆ ದೇಣಿಗೆ ನೀಡಿದ ಇತರ ಸಂಸ್ಥೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT